ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಮುಂದಿನ ವರ್ಷ ಜನವರಿ ಅಂತ್ಯಕ್ಕೆ ಬಿಡುಗಡೆಯಾಗಲಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಸಾಬೀತಾದ ಹಿನ್ನೆಲೆ 2017 ರ ಫೆ. 15ರಂದು ಜಯಲಿಲಿತಾ, ಶಶಿಕಲಾ, ಇಳವರಸಿ ಹಾಗೂ ಸುಧಾಕರನ್ಗೆ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಜಯಲಲಿತಾಗೆ 100 ಕೋಟಿ ರೂ. ದಂಡ, ಶಶಿಕಲಾ ಸೇರಿದಂತೆ ಮೂವರಿಗೆ ತಲಾ 10 ಕೋಟಿ ರೂಪಾಯಿ ದಂಡ ವಿಧಿಸಿ ನ್ಯಾ. ಮೈಕಲ್ ಖನ್ನಾ ತೀರ್ಪು ನೀಡಿದ್ದರು. ಆದರೆ ತೀರ್ಪು ಬರುವ ಮುನ್ನವೇ ಜಯಲಿಲಿತಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇನ್ನುಳಿದ ಮೂವರು ಅಪರಾಧಿಗಳು 2017ರ ಫೆ. 15ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
ಮುಂದಿನ ವರ್ಷ ಫೆಬ್ರವರಿಗೆ ಮೂವರ ನಾಲ್ಕು ವರ್ಷಗಳ ಶಿಕ್ಷೆ ಪೂರ್ಣಗೊಳ್ಳಲಿದೆ. ಜೈಲಿನಲ್ಲಿದ್ದಾಗ ಶಶಿಕಲಾ ನಡತೆ, ಪೆರೋಲ್ ರಜೆ ಇವೆಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ, ಜನವರಿ ಅಂತ್ಯಕ್ಕೆ ಶಶಿಕಲಾ ಅಂಡ್ ಟೀಂಅನ್ನು ಬಿಡುಗಡೆ ಮಾಡಲು ಜೈಲಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
10 ಕೋಟಿ ದಂಡ ಕಟ್ತಾರಾ ಶಶಿಕಲಾ?
ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ಬಿಡುಗಡೆಯಾಗಬೇಕಾದರೆ ನ್ಯಾಯಾಲಯ ವಿಧಿಸಿದ 10 ಕೋಟಿ ರೂ. ದಂಡವನ್ನು ಶಶಿಕಲಾ ಕಟ್ಟಬೇಕಾಗುತ್ತದೆ. ಆದರೆ ಈಗಾಗಲೇ ಪಕ್ಷದಿಂದ ಉಚ್ಛಾಟನೆಗೊಂಡು ಆಸ್ತಿ, ಹಣ ಎಲ್ಲವನ್ನೂ ಕಳೆದುಕೊಂಡಿರುವ ಶಶಿಕಲಾ 10 ಕೋಟಿ ರೂ. ದಂಡ ಕಟ್ಟುತ್ತಾರಾ? ಅಷ್ಟೊಂದು ದೊಡ್ಡ ಮೊತ್ತ ಕಟ್ಟಲು ಶಶಿಕಲಾಗೆ ಶಕ್ತಿ ಇದೆಯಾ ಎಂಬ ಪ್ರಶ್ನೆಗಳು ಉದ್ಭವಾಗಿವೆ.
ದಂಡ ಕಟ್ಟದಿದ್ದರೆ ಇನ್ನೊಂದು ವರ್ಷ ಜೈಲು ಶಿಕ್ಷೆ ಖಚಿತ:
ನ್ಯಾಯಾಲಯದ ತೀರ್ಪಿನಂತೆ ಶಶಿಕಲಾ ಜೈಲಿನಿಂದ ಬಿಡುಗಡೆಯಾಗಬೇಕಾದರೆ 10 ಕೋಟಿ ರೂ. ದಂಡ ಕಟ್ಟಲೇಬೇಕಾದ ಅನಿವಾರ್ಯತೆ ಇದೆ. ಚೆಕ್ ಅಥವಾ ಡಿಮಾಂಡ್ ಡ್ರಾಫ್ಟ್ (ಡಿಡಿ) ಮೂಲಕ ದಂಡ ಪಾವತಿಸಬಹುದಾಗಿದೆ. ಇದಕ್ಕೆ ಆದಾಯ ತೆರಿಗೆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ತರಬೇಕಾಗುತ್ತದೆ. ಒಂದು ವೇಳೆ ದಂಡ ಕಟ್ಟದಿದ್ದರೆ ಇನ್ನೊಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ. ಇದೇ ನಿಯಮ ಸುಧಾಕರನ್ ಹಾಗೂ ಇಳವರಸಿಗೆ ಕೂಡ ಅನ್ವಯವಾಗಲಿದೆ.