ಬೆಂಗಳೂರು: ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ವಿಡುದಲೈ’ ಕೆಲವು ದಿನಗಳ ಹಿಂದೆ ದೇಶಾದ್ಯಂತ ಬಿಡುಗಡೆಯಾಗಿ ಜನಮನ್ನಣೆ ಪಡೆಯುತ್ತಿದೆ. ಈ ಚಿತ್ರದ ವಿಶೇಷತೆಯೆಂದರೆ, ತಮಿಳಿನ ಖ್ಯಾತ ನಟರಾದ ವಿಜಯ್ ಸೇತುಪತಿ, ಸೂರಿ, ಗೌತಂ ವಾಸುದೇವ ಮೆನನ್ ಮುಂತಾದವರ ಜೊತೆಗೆ ಕನ್ನಡದ ಆ ದಿನಗಳು ಖ್ಯಾತಿಯ ಸರ್ದಾರ್ ಸತ್ಯ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು.
ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಎಸ್ ಐ ವೆಲ್ ಮುರಗನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸತ್ಯ, ತಮ್ಮ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆ ದಿನಗಳು ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸತ್ಯ, ಆ ನಂತರ ‘ಸ್ಲಂ ಬಾಲ’, ‘ರಾಜಧಾನಿ’, ‘ದ್ಯಾವ್ರೇ’, ‘ಚಂಬಲ್’ ಮುಂತಾದ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಗುರುತಿಸಿಕೊಂಡವರು. ಆ ನಂತರ ‘ಗುಂಡ್ರು ಗೋವಿ’ ಮೂಲಕ ಹೀರೋ ಆಗಿಯೂ ಮಿಂಚಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ತಮ್ಮದೇ ಸಾಯಿನಿರ್ಮಲ ಪ್ರೊಡಕ್ಷನ್ಸ್ ಸಂಸ್ಥೆಯಡಿ ‘ಪದ್ಮಾವತಿ’, ‘ಕನ್ನಡ ಕೋಗಿಲೆ’ ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ನಿರ್ಮಿಸಿದರು, ಈಗ ದೊಡ್ಡ ಮಟ್ಟದಲ್ಲಿ ‘ವಿಡುದಲೈ’ ನಲ್ಲಿ ನಟಿಸಿದ್ದಾರೆ.
ವೆಟ್ರಿಮಾರನ್ ಒಳ್ಳೆಯ ಸ್ನೇಹಿತರು: ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ’ ಚಿತ್ರದಲ್ಲಿ ನಟಿಸುವುದಕ್ಕೆ ಮುಖ್ಯ ಕಾರಣ ನಿರ್ದೇಶಕ ಜೇಕಬ್ ವರ್ಗೀಸ್ ಎನ್ನುವ ಸತ್ಯ, ‘ನನ್ನ ಮತ್ತು ಜೇಕಬ್ ನಡುವೆ ಒಳ್ಳೆಯ ಬಾಂಧವ್ಯವಿದೆ. ಅವರ ‘ಚಂಬಲ್’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಾನು ನಟಿಸಿದ್ದೆ. ಅವರು ಮತ್ತು ವೆಟ್ರಿಮಾರನ್ ಒಳ್ಳೆಯ ಸ್ನೇಹಿತರು. ಒಮ್ಮೆ ವೆಟ್ರಿಮಾರನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅವರು ಒಂದು ನಿಮಿಷ ನನ್ನನ್ನು ಸೂಕ್ಷ್ಮವಾಗಿ ಗಮನಿಸಿದರು. ಅದಾಗಿ ಮೂರು ತಿಂಗಳಲ್ಲಿ ನಾನು ವಿಡುದಲೈ ಚಿತ್ರದ ಭಾಗವಾಗಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ಸತ್ಯ.
ತಮಿಳು ಚಿತ್ರವೊಂದರಲ್ಲಿ ನಟಿಸಬೇಕು ಎಂಬುದು ಸತ್ಯ ಅವರ ತಂದೆ - ತಾಯಿಯ ಆಸೆಯಾಗಿತ್ತಂತೆ. ‘ನಾನು ಮೂಲತಃ ಚಾಮರಾಜನಗರದವನು. ಕನ್ನಡದ ಜೊತೆಗೆ ತಮಿಳು ಸಹ ಬರುತ್ತದೆ. ಅಷ್ಟೇ ಅಲ್ಲ, ನನಗೆ ಐದು ಭಾಷೆಗಳು ಚೆನ್ನಾಗಿ ಮಾತನಾಡುವುದಕ್ಕೆ ಬರುತ್ತದೆ. ನಾನು ನಾಯಕನಾಗಿ ನಟಿಸಿದ ‘ಗುಂಡ್ರು ಗೋವಿ’ ಅಷ್ಟೇನೂ ಯಶಸ್ವಿಯಾಗಲಿಲ್ಲ. ಎರಡನೆಯ ಚಿತ್ರ ‘ಬೀರ’ ಬಿಡುಗಡೆಯಾಗಲೇ ಇಲ್ಲ. ಆ ಚಿತ್ರಕ್ಕಾಗಿ ಮೂರು ವರ್ಷ ಕಷ್ಟಪಟ್ಟಿದ್ದೆ. ಆದರೆ, ಚಿತ್ರ ಬಿಡುಗಡೆಯಾಗದಿದ್ದರಿಂದ ನನ್ನ ಶ್ರಮವೆಲ್ಲ ವ್ಯರ್ಥವಾಯಿತು. ಈ ಮಧ್ಯೆ, ನನಗೆ ಕನ್ನಡದಲ್ಲಿ ಸರಿಯಾಗಿ ಕೆಲಸ ಸಿಗುತ್ತಿರಲಿಲ್ಲ, ಸಿಕ್ಕರೂ ದುಡ್ಡು ಸಿಗುತ್ತಿರಲಿಲ್ಲ. ಆಗ ಹೆಂಡತಿ ನಿರ್ಮಲಾ ಆಸೆಯ ಮೇರೆಗೆ ಸಾಯಿ ನಿರ್ಮಲಾ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದೆ. ಅಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡೆ. ಎರಡ್ಮೂರು ವರ್ಷಗಳ ಕಾಲ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿದ್ದೇವೆ.
ತಮಿಳಿಗೆ ಹೋಗು ಎಂದು ಸಲಹೆ ನೀಡಿದ್ದೇ ತಾಯಿ: ಇದುವರೆಗೂ 1500 ದಿನಕ್ಕೂ ಹೆಚ್ಚು ಚಿತ್ರೀಕರಣ ಮಾಡಿರುವ ಸಂಸ್ಥೆ ನಮ್ಮದು. ನಮ್ಮ ಸಂಸ್ಥೆಯಲ್ಲಿ ನೂರಾರು ಜನ ಕೆಲಸ ಮಾಡಿದ್ದಾರೆ. ಸಾವಿರಾರು ಜನ ಊಟ ಮಾಡಿದ್ದಾರೆ. ಇದೆಲ್ಲವೂ ಖುಷಿ ಇದ್ದರೂ, ನಟನಾಗಿ ಏನಾದರೂ ಸಾಧಿಸಬೇಕು ಎಂಬ ಆಸೆ ಮಾತ್ರ ಹಾಗೆಯೇ ಹಸಿ ಹಸಿ ಯಾಗಿತ್ತು. ನನ್ನ ಪ್ರತಿಭೆ ವ್ಯರ್ಥವಾಗುತ್ತಿರುವುದನ್ನು ನೋಡಿ, ಇಲ್ಲಿ ಸಾಧ್ಯವಾಗದಿದ್ದರೆ ತಮಿಳಿಗೆ ಹೋಗು ಎಂದು ಸಲಹೆ ನೀಡಿದ್ದೇ ನನ್ನ ತಾಯಿ.
ಅಲ್ಲಿಯವರೆಗೂ ಕನ್ನಡದಲ್ಲೇ ನಟಿಸುತ್ತಿದ್ದೆ. ಆ ನಂತರ ತಮಿಳಿನಲ್ಲಿ ಅವಕಾಶ ಸಿಗುತ್ತದಾ ಎಂದು ಪ್ರಯತ್ನ ಮಾಡಿದೆ. ಆಗ ವೆಟ್ರಿಮಾರನ್ ಪರಿಚಯವಾಯಿತು. ಈಗ ನನ್ನ ಮೊದಲ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಆದರೆ, ಅದನ್ನು ನೋಡಲು ನನ್ನ ತಂದೆ - ತಾಯಿ ಇಬ್ಬರೂ ಇಲ್ಲ. Viduthalai ಚಿತ್ರೀಕರಣದ ಸಂದರ್ಭದಲ್ಲಿ 20 ದಿನಗಳ ಅಂತರದಲ್ಲಿ ಇಬ್ಬರೂ ನಿಧನರಾದರು. ಅವರ ಆಸೆಯೇನೋ ಈಡೇರಿಸಿದೆ. ಆದರೆ, ಅದನ್ನು ನೋಡಲು ಅವರೇ ಇಲ್ಲವಲ್ಲ ಎಂಬ ಬೇಸರವಿದೆ.
120 ದಿನಗಳ ಕಾಲ ಕೆಲಸ ಮಾಡಿದ ಸತ್ಯ: ತನ್ನ ತಂದೆ ತಾಯಿ ಇಬ್ಬರನ್ನೂ ವೆಟ್ರಿಮಾರನ್ರವರಲ್ಲಿ ಕಾಣುತ್ತೇನೆ’ ಎನ್ನುತ್ತಾರೆ ಸತ್ಯ. ‘ವಿಡುದಲೆ ಚಿತ್ರಕ್ಕೆ ಸತ್ಯ ಆಯ್ಕೆಯಾದಾಗ, ಅದೊಂದು ಪೂರ್ಣಪ್ರಮಾಣವಾದ ಪಾತ್ರವಿರಬಹುದು ಎಂದು ಯೋಚಿಸಿರಲಿಲ್ಲವಂತೆ. ನಾನು ಆ ಚಿತ್ರಕ್ಕೆ ಆಯ್ಕೆಯಾದಾಗ, ಚಿಕ್ಕ ಪಾತ್ರವಿರಬಹುದು, ಮೂರ್ನಾಲ್ಕು ದಿನಗಳ ಕಾಲ ಕೆಲಸವಿರಬಹುದು ಅಂತಂದುಕೊಂಡಿದ್ದೆ. ಆದರೆ, ಆ ಚಿತ್ರದಲ್ಲಿ ನಾನು ಸುಮಾರು 120 ದಿನಗಳ ಕಾಲ ಕೆಲಸ ಮಾಡಿದ್ದೇನೆ. ನಾನು ನನ್ನ ಹಳೆಯ ನೆನಪುಗಳನ್ನೆಲ್ಲ ಬಿಟ್ಟು ಹೋಗಿದ್ದೆ.
ಎರಡನೆಯ ಭಾಗದ ಚಿತ್ರೀಕರಣ ಬಹುತೇಕ ಕಂಪ್ಲೀಟ್: ವೆಟ್ರಿಮಾರನ್ ಏನು ಹೇಳಿದರೋ, ಅದನ್ನಷ್ಟೇ ಮಾಡಿದ್ದೇನೆ. ಅವರಿಂದ ತುಂಬಾ ಕಲಿತಿದ್ದೇನೆ. ಇಡೀ ಚಿತ್ರದಲ್ಲಿ ನನ್ನ ಪಾತ್ರವಿದೆ. ವಿಜಯ್ ಸೇತುಪತಿ, ಸೂರಿ, ಗೌತಮ್ ಮೆನನ್, ರಾಜೀವ್ ಮೆನನ್ ಮುಂತಾದ ಪ್ರತಿಭಾವಂತ ಕಲಾವಿದರ ಜತೆಗೆ ನಟಿಸುವ ಅವಕಾಶ ಸಿಕ್ಕಿದೆ. ನನ್ನ ಕೆಲಸ ಇನ್ನೂ ಪೂರ್ತಿ ಮುಗಿದಿಲ್ಲ. ಎರಡನೆಯ ಭಾಗದಲ್ಲೂ ನನ್ನ ಪಾತ್ರ ಸಾಕಷ್ಟಿದೆ. ಈಗಾಗಲೇ ಎರಡನೆಯ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನೂ 50 ದಿನಗಳಷ್ಟು ಚಿತ್ರೀಕರಣ ಬಾಕಿ ಇದೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತಾರೆ ಸತ್ಯ.
ವೆಟ್ರಿಮಾರನ್ ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡುತ್ತಾರೆ : ‘ವಿಡುದಲೈ’ಚಿತ್ರದಿಂದ ಕಷ್ಟಗಳ ಬಿಡುಗಡೆ ಆಯ್ತು ಎನ್ನುವ ಸತ್ಯ, ‘ನಾನು ಕಳೆದುಕೊಂಡಿದ್ದನ್ನೆಲ್ಲ ‘ವಿಡುದಲೈ’ ವಾಪಸ್ ತಂದುಕೊಟ್ಟಿದೆ. ಇದಕ್ಕೂ ಮುನ್ನ ನಾನು ಕರ್ನಾಟಕಕ್ಕೆ ಮಾತ್ರ ಗೊತ್ತಿತ್ತು. ಈಗ ಆ ಚಿತ್ರದಲ್ಲಿ ತಮಿಳು ನಾಡು, ಆಂಧ್ರ ಮುಂತಾದ ಕಡೆಗಳಲ್ಲೂ ಪರಿಚಿತನಾಗಿದ್ದೇನೆ. ವೆಟ್ರಿಮಾರನ್ ಒಬ್ಬ ಸೂಕ್ಷ್ಮ ಸಂವೇದನೆಯ ನಿರ್ದೇಶಕ. ಅವರಿಗೆ ಜಾತಿ, ಬಣ್ಣ, ಭಾಷೆಯ ಬೇಧ - ಭಾವವಿಲ್ಲ. ಅವರು ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡುತ್ತಾರೆ.
ಮನುಷ್ಯನಿಗೆ ಮನುಷ್ಯನೇ ದೊಡ್ಡ ಶತ್ರು: ಚಿತ್ರ ಜನರಿಗೆ ಇಷ್ಟವಾಗಿದೆಯೆಂದರೆ, ಅದಕ್ಕೆ ಕಾರಣ ಪ್ರಸ್ತುತತೆ. ಇದು ಯಾವುದೋ ಒಂದು ಪ್ರದೇಶದ ಸಮಸ್ಯೆಯಲ್ಲ. ಪ್ರತಿ ರಾಜ್ಯದಲ್ಲೂ ನಡೆದ ಮತ್ತು ನಡೆಯಬಹುದಾದ ಘಟನೆಯಾಗಿದೆ. ಹಾಗಾಗಿ, ಅದನ್ನು ಎಲ್ಲರೂ ತಮಗೆ ಹೋಲಿಸಿಕೊಂಡು ನೋಡುತ್ತಿದ್ದಾರೆ. ಇವತ್ತು ಮಾನವಕುಲಕ್ಕೆ ದೊಡ್ಡ ಅಪಾಯವಿರುವುದು ಪ್ರಕೃತಿಯಿಂದಲ್ಲ. ಇವತ್ತು ಮನುಷ್ಯನಿಗೆ ದೊಡ್ಡ ಶತ್ರುವೆಂದರೆ ಅದು ಮನುಷ್ಯನೇ. ಮನುಷ್ಯನ ದುರ್ಗುಣದಿಂದ ಇನ್ನೊಬ್ಬ ಬಲಿಯಾಗುತ್ತಿದ್ದಾನೆ. ಅವನ ತಾರತಮ್ಯದಿಂದಾಗಿ ಹಲವರಿಗೆ ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ಇದೊಂದು ಶ್ರೇಷ್ಠವಾದ ಚಿತ್ರ. ಎಲ್ಲ ಕಡೆ ಮೆಚ್ಚುಗೆ ಸಿಗುತ್ತಿದೆ. ಚಿತ್ರ ನೋಡಿದ ಅನ್ಯಭಾಷಿಕರು ಸಹ ಗುರುತು ಹಿಡಿದು ಮಾತನಾಡಿಸುತ್ತಿದ್ದಾರೆ’ ಎನ್ನುತ್ತಾರೆ ಸತ್ಯ.
ನನ್ನನ್ನು ಮೊದಲು ರೂಪಿಸಿದ್ದು ಕನ್ನಡಿಗರು: ‘ವಿಡುದಲೈ’ ನಂತರ ಸತ್ಯ ಮೂರು ಸ್ಕ್ರಿಪ್ಟ್ ಕೇಳಿದ್ದಾರಂತೆ. ಒಂದು ಚಿತ್ರವನ್ನೂ ಸದ್ದಿಲ್ಲದೆ ಮುಗಿಸಿದ್ದಾರಂತೆ. ‘ನನ್ನ ಮೊದಲ ಪ್ರಾಶಸ್ತ್ಯ ಯಾವತ್ತೂ ಕನ್ನಡಕ್ಕೇ. ಏಕೆಂದರೆ, ನನ್ನನ್ನು ಮೊದಲು ರೂಪಿಸಿದ್ದು ಕನ್ನಡಿಗರು. ನನ್ನನ್ನು ಇವತ್ತು ಬೇರೆ ಭಾಷೆಯವರು ಗುರುತಿಸುತ್ತಾರೆ ಎಂದರೆ, ಅದಕ್ಕೆ ಕಾರಣ ಕನ್ನಡ ಮತ್ತು ಕರ್ನಾಟಕ. ಈ ಭಾಷೆಗೆ ಮತ್ತು ಮಣ್ಣಿಗೆ ನಾನು ಯಾವತ್ತೂ ಚಿರಋಣಿ. ಈಗಾಗಲೇ ಕನ್ನಡದಿಂದ ಹಲವು ಅವಕಾಶಗಳು ಬರುತ್ತಿವೆ. ಇಲ್ಲಿಂದ ಸಾಯುವವರೆಗೂ ನನಗೆ ಕೆಲಸ ಸಿಗುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಸತ್ಯ.
ಇದನ್ನೂ ಓದಿ: ನಂದ ಲವ್ಸ್ ನಂದಿತಾ ಚಿತ್ರದಲ್ಲಿ ನಟಿಸಿದ್ದ ಟಪೋರಿ ಸತ್ಯ ನಿಧನ