ಬೆಂಗಳೂರು: ನಮ್ಮ ಪಕ್ಷಕ್ಕೆ ಬನ್ನಿ, ಜಮೀರ್ರನ್ನು ಸಿಎಂ ಮಾಡುವ ವಿಚಾರವನ್ನು ಪಕ್ಷದ ವರಿಷ್ಠರ ಜೊತೆ ಚರ್ಚೆ ಮಾಡುತ್ತೇನೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಹೇಳಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ನಾಯಕರಾದ ಕುಮಾರಣ್ಣ, ಸಿದ್ದರಾಮಯ್ಯಗೆ ಐದು ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಉತ್ತರ ನೀಡಿಲ್ಲ. ಕಾಂಗ್ರೆಸ್ನವರು ಅಲ್ಪಸಂಖ್ಯಾತರಿಗೆ ಹೇಗೆ ಅನ್ಯಾಯ ಮಾಡಿದ್ದಾರೆ ಎಂದು ಕುಮಾರಣ್ಣ ಹೇಳಿದ್ದಾರೆ. ಜೆಡಿಎಸ್ ಮೇಲೆ ಕುಮಾರಸ್ವಾಮಿ ಮೇಲೆ ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರು ದಾಳಿ ಮಾಡಿದ್ದಾರೆ ಎಂದು ಆರೋಪಿದರು.
ಜಮೀರ್ಗೆ ನೈತಿಕತೆ ಇಲ್ಲ:
ಭೈರತಿ ಸುರೇಶ್ ಅವರನ್ನು ಕುಮಾರಸ್ವಾಮಿ ಬಳಿ ಜಮೀರ್ ಅವರೇ ಕಳೆದುಕೊಂಡು ಬಂದು ಬೆಂಬಲ ಕೊಡಿಸಲು ಮುಂದಾಗಿದ್ದರು. ಆಗ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸುವ ಕೆಲಸ ಮಾಡಿದ್ದರು. ಇವತ್ತು ಜಮೀರ್ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಉಕ್ಕಿ ಬರ್ತಿದೆ. ಜಮೀರ್ ಅಹ್ಮದ್ಗೆ ಯಾವ ನೈತಿಕತೆ ಇದೆ. ಜಮೀರ್ ಅವರ ಮೂಲ ಬೇರು ಯಾವುದು. ಜಮೀರ್ನನ್ನು ವಿಧಾನಸೌಧಕ್ಕೆ ಪ್ರವೇಶ ಮಾಡಿಸಿದ್ದು ಯಾರು, ಜಮೀರ್ ಜೆಡಿಎಸ್ನಲ್ಲಿದ್ದಾಗ ಕುಮಾರಣ್ಣ, ಕಾಂಗ್ರೆಸ್ನಲ್ಲಿದ್ದಾಗ ಸಿದ್ದರಾಮಣ್ಣ, ಮುಂದೆ ಯಾವ ಅಣ್ಣನೋ ? ಕಾಂಗ್ರೆಸ್ನವರು ಜಮೀರ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಅಂತಾ ಫೋಷಣೆ ಮಾಡಲಿ ಎಂದರು.
ಎಲ್ಲಿ ಜಮೀರ್ನ್ನು ಮುಗಿಸುತ್ತಾರೋ ಎಂಬ ಭಯ:
ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಎಷ್ಟು ಡೀಲ್ ಮಾಡಿಕೊಂಡಿದ್ದಿರಾ ಎಂದು ರಾಜ್ಯದ ಜನರಿಗೆ ಗೊತ್ತಿದೆ. ನೀವು ನಮ್ಮ ನಾಯಕರು ಹಾಗೂ ಜೆಡಿಎಸ್ ಬಗ್ಗೆ ಮಾತನಾಡ್ತೀರಾ, ಇಲ್ಲಿದ್ದಾಗ ಕುಮಾರಣ್ಣ ನಮ್ಮ ನಾಯಕರು ಎಂದು ಹೇಳಿದ್ದರು. ಈಗ ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹೇಳುತ್ತಿದ್ದೀರಿ, ಸಿದ್ದರಾಮಯ್ಯನವರು ಅಲ್ಪಸಂಖ್ಯಾತ ಮುಖಂಡರನ್ನು ಮುಗಿಸುತ್ತಿದ್ದಾರೆ. ರೋಷನ್ ಬೇಗ್ ಅವರನ್ನು ಮುಗಿಸಿದ್ದಾರೆ. ತನ್ವೀರ್ ಸೇಠ್ ಅವರನ್ನು ಮುಗಿಸಲು ಹೊರಟ್ಟಿದ್ದಾರೆ. ಮುಂದೆ ಜಮೀರ್ ಸರದಿ, ನಿಮ್ಮನ್ನು ಸಿದ್ದರಾಮಯ್ಯ ಮುಗಿಸುತ್ತಾರೆ ಎಂಬ ಭಯ ಇದೆ ಎಂದರು.
ಕಾಂಗ್ರೆಸ್ಗೆ ಸವಾಲ್ :
ಜೆಡಿಎಸ್ಗೆ ಧಮ್ ಇದ್ದರೆ ಮುಸ್ಲಿಂ ಕ್ಯಾಂಡಿಟೆಟ್ನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಜಮೀರ್ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ನವರಿಗೆ ಧಮ್ ಇದ್ದರೆ ಮುಸ್ಲಿಂ ಅಭ್ಯರ್ಥಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿ. ಕುಮಾರಣ್ಣ ಅವರು ಕೇಳಿದ ಐದು ಪ್ರಶ್ನೆಗೆ ಉತ್ತರ ನೀಡಿ. ಜಮೀರ್ ಏನೇ ಹೇಳಿದರು ಅದಕ್ಕೆ ಕುಮಾರಣ್ಣ ಉತ್ತರ ನೀಡಬಾರದು. ನಾನು ಕುಮಾರಣ್ಣ ಅವರಿಗೆ ಮನವಿ ಮಾಡುತ್ತೇನೆ. ಜಮೀರ್ ಪ್ರಶ್ನೆಗೆ ಉತ್ತರ ನೀಡಬೇಡಿ ಎಂದರು.
ಜೆಡಿಎಸ್ ಬಗ್ಗೆ ಮಾತನಾಡದಿದ್ರೆ ಸಿದ್ದುಗೆ ನಿದ್ದೆ ಬರಲ್ಲ:
ಸಿದ್ದರಾಮಯ್ಯ ಅವರಿಗೆ ಜೆಡಿಎಸ್ನ ಕೆದಕದೇ ಹೋದರೆ ನಿದ್ದೆ ಬರಲ್ಲ. ಬರೀ ಜೆಡಿಎಸ್ ಬಗ್ಗೆನೇ ಜಪ ಮಾಡುತ್ತಾರೆ. ಕುಮಾರಸ್ವಾಮಿ ಬಗ್ಗೆ ಮಾತನಾಡಲೇ ಬೇಕು. ಇಡೀ ದೇಶದಲ್ಲಿ ಕಾಂಗ್ರೆಸ್ ಮುಳುಗಿ ಹೋಗುತ್ತದೆ. ಇವರೆ ಅಹಿಂದ ಅಲ್ಪಸಂಖ್ಯಾತರ ನಾಯಕರು. ದೇವೇಗೌಡರು, ಕುಮಾರಣ್ಣ ಏನು ಮಾಡಿಲ್ವಾ ಎಂದು ಕಿಡಿಕಾರಿದರು.
ಉಪಚುನಾವಣೆಯಲ್ಲಿ ಜೆಡಿಎಸ್ ಇಬ್ಬರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ನೀವು ಮುಸ್ಲಿಮರ ಬಗ್ಗೆ ಕಾಳಜಿ ಹೊಂದಿರುವವರಲ್ಲವೇ, ತಾಕತ್ ಇದ್ದರೆ ನೀವು ಅಭ್ಯರ್ಥಿಗಳನ್ನೇ ನಿಲ್ಲಿಸಬಾರದಿತ್ತು. ಅವರಿಗೆ ಸಹಕಾರ ನೀಡಬೇಕಿತ್ತು. ಆದರೆ, ಕಾಂಗ್ರೆಸ್ನವರು ನಮಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದೆಂತಹ ನೈತಿಕತೆ ಎಂದು ಪ್ರಶ್ನಿಸಿದರು.
ಇಕ್ಬಾಲ್ನವರು ಹೇಳುತ್ತಾರೆ ಜೆಡಿಎಸ್ ಮೋಸ ಮಾಡಿದೆಯಂತೆ. ಇಕ್ಬಾಲ್ ಅವರನ್ನು ಜೆಡಿಎಸ್ ಎಂಎಲ್ಎ ಮಾಡಿತು. ಗಂಗಾವತಿಗೆ ಕುಮಾರಸ್ವಾಮಿ 20 ಕೋಟಿ ರೂ. ಅನುದಾನ ನೀಡಿದರು. ಗಂಗಾವತಿ ಕ್ಷೇತ್ರದ ಜನ ನಿಮಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಟಿ.ಎ.ಶರವಣ ಹೇಳಿದರು.
ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲ್ ಮಾಸ್ಟರ್ : ಹೆಚ್ಡಿಕೆ ವಿರುದ್ಧ ಜಮೀರ್ ವಾಕ್ಪ್ರಹಾರ