ಬೆಂಗಳೂರು : 72ನೇ ಗಣರಾಜ್ಯೋತ್ಸವ ಹಿನ್ನೆಲೆ ನಗರದ ಸಪ್ತಗಿರಿ ಆಸ್ಪತ್ರೆ ವಿಶೇಷ ರೀತಿ ಆಚರಣೆ ನಡೆಸಿ ಗಮನ ಸೆಳೆದಿದೆ. ಕೊರೊನಾ ಲಸಿಕೆ ಕುರಿತು ಜನತೆಯಲ್ಲಿ ಅರಿವು ಮೂಡಿಸಲು ಹಾಗೂ ಭಯ ಹೋಗಲಾಡಿಸುವ ದೃಷ್ಟಿಯಿಂದ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು.
ಸಪ್ತಗಿರಿ ಆಸ್ಪತ್ರೆಯ ವೈದ್ಯರ ತಂಡದಿಂದ ಗಣರಾಜ್ಯೋತ್ಸವ ಆಚರಣೆ ಪ್ರಯುಕ್ತ ತ್ರಿವರ್ಣದಲ್ಲಿ 7 ಅಡಿ ಉದ್ದದ ಲಸಿಕೆ ನಿರ್ಮಿಸಿದ್ದರು. ಅಲ್ಲದೆ 72 ಅಡಿ ಉದ್ದದ ಬೃಹತ್ ಧ್ವಜ ತಯಾರಿಸಿ ಸಂಭ್ರಮಿಸಿದರು.
ಈ ವೇಳೆ ಯಾರೆಲ್ಲಾ ಲಸಿಕೆ ಪಡೆಯಬೇಕು ಯಾರೆಲ್ಲಾ ಪಡೆಯಬಾರದು, ಪಡೆದ ಬಳಿಕ ಏನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಮಾಹಿತಿ ನೀಡಿದರು. ಒಂದು ಸಂಸ್ಥೆಯ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದು ನಂತರ ಬೇರೊಂದು ಕಂಪನಿಯ ಲಸಿಕೆ ಪಡೆಯಬಾರದು. ಮೊದಲ ಮತ್ತು ಎರಡನೇ ಡೋಸ್‌ನ ಒಂದೇ ಕಂಪನಿಯ ಲಸಿಕೆ ಪಡೆಯಬೇಕು ಎಂದರು.
ಲಸಿಕೆ ಪಡೆಯುವಾಗ ಮುನ್ನೆಚ್ಚರಿಕೆ ವಹಿಸಬೇಕು. ಯಾರಿಗೆ ಹಿಂದಿನ ಡೋಸ್ನಲ್ಲಿ ಅನಾಫಿಲ್ಯಾಕ್ಸಿಕ್ ಅಥವಾ ಅಲರ್ಜಿ ಉಂಟಾದವರು ಎಚ್ಚರಿಕೆ ವಹಿಸಬೇಕು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಲಸಿಕೆ ಪಡೆಯುವುದು ಸೂಕ್ತವಲ್ಲ.
ವಾಸ್ತವವಾಗಿ ಯಾವುದೇ ಅನಾರೋಗ್ಯ ಸಮಸ್ಯೆಗೆ ಒಳಗಾಗಿರುವವರು ಅಥವಾ ಆಸ್ಪತ್ರೆಗಳಿಗೆ ದಾಖಲಾಗಿರುವ ರೋಗಿಗಳು ತಾತ್ಕಾಲಿಕ 4 ರಿಂದ 8 ವಾರಗಳ ಕಾಲ ಲಸಿಕೆ ಪಡೆಯುವುದನ್ನು ಮುಂದೂಡಬೇಕು ಎಂದು ಮಾಹಿತಿ ನೀಡಿದರು.
ಯಾವುದೇ ರೀತಿಯ ರಕ್ತಸ್ರಾವ ಅಥವಾ ರಕ್ತ ಹೆಪ್ಪುಗಟ್ಟುವಿಕೆಯ ಅಸ್ವಸ್ಥತೆ ಹೊಂದಿರುವವರು ಮುನ್ನೆಚ್ಚರಿಕೆ ವಹಿಸಬೇಕು. ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಇರುವವರು ಮತ್ತು ಹೃದ್ರೋಗ, ನರರೋಗ, ಶ್ವಾಸಕೋಶದ ಕಾಯಿಲೆ, ಮೂತ್ರಪಿಂಡ ಸೇರಿ ಇತರೆ ಕಾಯಿಲೆಗಳಿದ್ದರೆ ಲಸಿಕೆ ತೆಗೆದುಕೊಳ್ಳಬಾರದು ಎಂದರು.
ಇದನ್ನೂ ಓದಿ: ರಾಗಿಣಿ ಬಿಡುಗಡೆಗೆ ಕ್ಷಣಗಣನೆ ಆರಂಭ, ಜೈಲಿನಲ್ಲಿ ಸಂತಸ ತೋಡಿಕೊಂಡ ನಟಿ!