ಬೆಂಗಳೂರು: ದೈಹಿಕ ದೌರ್ಜನ್ಯ ಹಾಗೂ ಮಾನಸಿಕ ಕಿರುಕುಳ ಪ್ರಕರಣದಲ್ಲಿ ಸಿಐಡಿ ತನಿಖಾಧಿಕಾರಿಗಳ ಮುಂದೆ ಸ್ಯಾಂಟ್ರೋ ರವಿ ಎರಡನೇ ಪತ್ನಿ ಹಾಜರಾಗಿದ್ದಾರೆ. ಸಿಐಡಿ ಡಿವೈಎಸ್ಪಿ ನರಸಿಂಹಮೂರ್ತಿ ಮುಂದೆ ರವಿಯ ಎರಡನೇ ಪತ್ನಿ ಹಾಜರಾಗಿದ್ದು, ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಲಿದ್ದಾರೆ.
ಹೇಗಿರಲಿದೆ ವಿಚಾರಣೆ: ಮೊದಲಿಗೆ ರವಿ ಪತ್ನಿಯ ಹೇಳಿಕೆಯನ್ನ ಲಿಖಿತ ರೂಪದಲ್ಲಿ ಪಡೆಯಲಿರುವ ತನಿಖಾಧಿಕಾರಿಗಳು ನಂತರ ಮಹಿಳಾ ಅಧಿಕಾರಿಯಿಂದ ಕೆಲ ಪ್ರಶ್ನೆಗಳನ್ನ ಮುಂದಿಟ್ಟು ಉತ್ತರ ಪಡೆಯಲಿದ್ದಾರೆ. ಬಳಿಕ ರವಿ ಪತ್ನಿಯನ್ನ ಶೇಷಾದ್ರಿಪುರಂ ಬಳಿ ವಾಸವಿದ್ದ ಫ್ಲಾಟ್, ಗರ್ಭಪಾತ ಮಾಡಿಸಲಾಗಿದೆ ಎನ್ನಲಾದ ಆಸ್ಪತ್ರೆ, ಅದಾದ ಬಳಿಕ ಬಸವನಗುಡಿಯಲ್ಲಿರುವ ರವಿಯ ಮನೆಗೆ ಕರೆದೊಯ್ಯಲಿದ್ದಾರೆ. ಈ ವೇಳೆ ಇಬ್ಬರು ಪಂಚರುಗಳ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ನಡೆಸಲಿದ್ದಾರೆ. ಎರಡನೇ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವ ಆರೋಪದಡಿ ಮೈಸೂರಿನ ವಿಜಯನಗರ ಠಾಣೆಯಲ್ಲಿ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು.
ಸ್ಯಾಂಟ್ರೋ ರವಿಗೆ ವೈದ್ಯಕೀಯ ತಪಾಸಣೆ: ಮತ್ತೊಂದು ಕಡೆ ಸಿಐಡಿ ಪೊಲೀಸರ ವಶದಲ್ಲಿರುವ ಸ್ಯಾಂಟ್ರೋ ರವಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ. ದೂರುದಾರರ ಹೇಳಿಕೆ ಬಳಿಕ ಪ್ರತಿಯಾಗಿ ರವಿಯ ವಿಚಾರಣೆ ಸಹ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
ಸಿಐಡಿ ತನಿಖೆಗೆ ವರ್ಗಾಯಿಸಿದ ರಾಜ್ಯ ಸರ್ಕಾರ: ಅತ್ಯಾಚಾರ, ವೇಶ್ಯಾವಾಟಿಕೆ, ವಂಚನೆ, ಜಾತಿ ನಿಂದನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮಂಜುನಾಥ್ ಕೆ.ಎಸ್. ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧದ ದೂರುಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಐಡಿ ಪೊಲೀಸರಿಗೆ ನಿರ್ದೇಶನ ನೀಡಿದೆ
ಇದನ್ನೂ ಓದಿ: ಸ್ಯಾಂಟ್ರೋ ರವಿ ಪ್ರಕರಣ: ಸಿಐಡಿ ತನಿಖೆಗೆ ವರ್ಗಾಯಿಸಿದ ರಾಜ್ಯ ಸರ್ಕಾರ
ಹೊಸ ಪ್ರಕರಣ ದಾಖಲಿಸಿದ್ದ 2ನೇ ಪತ್ನಿ: ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಹೊಸ ಕೇಸ್ ದಾಖಲಾಗಿದೆ. ಚೆಕ್ ಕಳ್ಳತನ ಸಂಬಂಧ ಮೈಸೂರಿನ ದೇವರಾಜ ಪೊಲೀಸ್ ಸ್ಟೇಷನ್ನಲ್ಲಿ ಸ್ಯಾಂಟ್ರೊ ರವಿ ವಿರುದ್ಧ ಅವರ ಎರಡನೇ ಪತ್ನಿ ದೂರು ನೀಡಿದ್ದಾರೆ. ಸಂತ್ರಸ್ತೆ ನೀಡಿದ ದೂರು ಆಧರಿಸಿ ಸ್ಯಾಂಟ್ರೋ ರವಿ ವಿರುದ್ಧ ಐಪಿಸಿ 465, 468, 506, 420 ಹಾಗೂ 34 ಸೆಕ್ಷನ್ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಟ್ರೋ ರವಿಗೆ ಮತ್ತೊಂದು ಸಂಕಷ್ಟ: ಹೊಸ ಪ್ರಕರಣ ದಾಖಲಿಸಿದ ಎರಡನೇ ಪತ್ನಿ
ಜನವರಿ 25ರ ವರೆಗೆ ನ್ಯಾಯಾಂಗ: ಅತ್ಯಾಚಾರ, ವಂಚನೆ, ಜಾತಿ ನಿಂದನೆ, ಅಕ್ರಮ ಹಣ ವರ್ಗಾವಣೆ ಸೇರಿ ವಿವಿಧ ಪ್ರಕರಣಗಳ ಆರೋಪಿ ಸ್ಯಾಂಟ್ರೊ ರವಿಯನ್ನು ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸ್ಯಾಂಟ್ರೊ ರವಿಯ ನ್ಯಾಯಾಂಗ ಬಂಧನವನ್ನು ಜನವರಿ 25ರ ವರೆಗೆ ವಿಸ್ತರಿಸಿ ನ್ಯಾಯಾಧೀಶರಾದ ಗುರುರಾಜ್ ಆದೇಶಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಸ್ಯಾಂಟ್ರೊ ರವಿ ಪರ ವಕೀಲರಾದ ಚೇತನ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.