ಬೆಂಗಳೂರು : ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ತೊಡಗಿದ್ದು ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿದೆ ಅಲ್ಲದೇ ಆಡಳಿತದಲ್ಲಿ ಬಿಎಎಸ್ವೈ ಪುತ್ರನ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ಹೈಕಮಾಂಡ್ ಗಮನಕ್ಕೆ ತರುವ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ.
ಮಂತ್ರಿ ಮಂಡಲ ರಚನೆ, ಖಾತೆ ಹಂಚಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದ ಬಿ.ಎಲ್ ಸಂತೋಷ್ ಇದೀಗ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲೂ ಸಿಎಂ ಕೈ ಕಟ್ಟಿಹಾಕಲು ಹೊರಟಿದ್ದಾರೆ.
ಹಿಂದಿನ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿತ್ತು ಎಂದು ನಾವೇ ಆರೋಪ ಮಾಡಿದ್ದೆವು. ಆದರೆ ಈಗ ನಮ್ಮ ಸರ್ಕಾರದಲ್ಲೇ ಅಧಿಕಾರಿಗಳ ವರ್ಗಾವಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಏಕಾಏಕಿ ಅಧಿಕಾರಿಗಳ ದೊಡ್ಡ ಮಟ್ಟದ ವರ್ಗಾವಣೆ, ಕೆಲ ವರ್ಗಾವಣೆ ಹಿಂಪಡೆಯುವುದು, ಎರಡೆರಡು ಪೋಸ್ಟಿಂಗ್ ನೀಡುವುದು ನಡೆಯುತ್ತಿದೆ. ಈ ವಿಷಯ ಪ್ರತಿಪಕ್ಷಗಳ ಆಹಾರಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವರ್ಗಾವಣೆ ವಿರುದ್ಧ ಹೇಳಿಕೆ ನೀಡುತ್ತಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂದು ಹೈಕಮಾಂಡ್ ಗೆ ಮಾಹಿತಿ ನೀಡಿದ್ದಾರೆ.
ಇದರ ಜೊತೆಯಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿರುವ ಬಿಎಎಸ್ವೈ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧವೂ ದೂರು ನೀಡಿದ್ದಾರೆ. ವರ್ಗಾವಣೆ ವಿಷಯದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದ ಸರ್ಕಾರದ ಆಡಳಿತ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಪಕ್ಷದಲ್ಲಿ ಅಸಮಧಾನದ ಹೊಗೆ ಏಳಲಿದೆ. ಸಿಎಂ ಆಡಳಿತದಲ್ಲಿ ವಿಜಯೇಂದ್ರ ನೇರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೈಕಮಾಂಡ್ ಗೆ ಮಾಹಿತಿ ನೀಡಿದ್ದಾರೆ.
ಬಿಎಸ್ವೈ ಮಾಡುತ್ತಿರುವ ವರ್ಗಾವಣೆ ಮತ್ತು ಪುತ್ರನ ಹಸ್ತಕ್ಷೇಪ ಕುರಿತು ಬಿಜೆಪಿಯ ಕೆಲ ನಾಯಕರ ದೂರನ್ನು ಆಧಾರವಾಗಿಟ್ಟುಕೊಂಡು ಬಿ.ಎಲ್ ಸಂತೋಷ್ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದು ಪುತ್ರ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದೆ. ವರ್ಗಾವಣೆ ಬಗ್ಗೆಯೂ ಹೈಕಮಾಂಡ್ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ಸಂದೇಶ ಬರುತ್ತಿದ್ದಂತೆ ಪುತ್ರನನ್ನ ಸಿಎಂ ದೂರವಿಟ್ಟಿದ್ದಾರೆ ಎನ್ನಲಾಗುತ್ತಿದೆ. ಪ್ರತಿ ದಿನ ಬೆಳಗ್ಗೆ ಸಿಎಂ ನಿವಾಸ ಧವಳಗಿರಿಯಲ್ಲಿ ಪ್ರತ್ಯಕ್ಷರಾಗುತ್ತಿದ್ದ ಬಿ.ವೈ ವಿಜಯೇಂದ್ರ ಕಳೆದ ಎರಡು ಮೂರು ದಿನಗಳಿಂದ ಅತ್ತ ಸುಳಿದಿಲ್ಲ, ಬಿಎಸ್ವೈ ಜೊತೆಯಲ್ಲಿಯೂ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಟ್ಟಿ ಹಾಕುವ ಜೊತೆಗೆ ಸಿಎಂ ಪುತ್ರ ರಾಜಕೀಯವಾಗಿ ಬೆಳೆಯುವುದನ್ನು ತಡೆಯಲು ಸಂತೋಷ್ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಅದಕ್ಕಾಗಿಯೇ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಹೇಶ್ ಅವರನ್ನು ನೇಮಿಸಿ ವಿಜಯೇಂದ್ರಗೆ ಹುದ್ದೆ ಸಿಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಬಿಎಸ್ವೈ ಮತ್ತು ಅವರ ಪುತ್ರನ ವಿರುದ್ಧ ಪಕ್ಷದಲ್ಲೇ ಅಸಮಧಾನ ಕಾಣಿಸಿಕೊಂಡಿದ್ದು ಸಂತೋಷ್ ತಂತ್ರಕ್ಕೆ ಬಿಎಸ್ವೈ ಪ್ರತಿತಂತ್ರ ಯಾವ ರೀತಿ ಇರಲಿದೆ ಎನ್ನುವುದು ಸಧ್ಯದ ಪ್ರಶ್ನೆಯಾಗಿದೆ.