ಬೆಂಗಳೂರು: ಮಲ್ಲೇಶ್ವರಂನ ಪ್ರಸಿದ್ಧ ಸ್ಯಾಂಕಿ ಕೆರೆಯ ಟ್ಯಾಂಕ್‌ಬಂಡ್ ರಸ್ತೆಯನ್ನು ಅಗಲೀಕರಣ ಮಾಡುವುದಕ್ಕೆ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ನಿವಾರಣೆಯಾಗಿದ್ದು, ಕೂಡಲೇ ಅಗಲೀಕರಣ ಕಾಮಾಗಾರಿ ಕೈಗೆತ್ತಿಕೊಳ್ಳುವಂತೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಬಗ್ಗೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರೆ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ದಿನೇದಿನೆ ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ಈ ರಸ್ತೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಅಗಲೀಕರಣಕ್ಕೆ ಸಂಬಂಧಿಸಿ ಬಹಳ ದಿನಗಳಿಂದ ಜನರ ಬೇಡಿಕೆ ಇದೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ನಿರ್ದೇಶನ ನೀಡಿದರು.
ತಡೆಗೋಡೆ ಕಟ್ಟಿ, ಆನಂತರ ಆ ತಡೆಗೋಡೆ ಹಾಗೂ ರಸ್ತೆ ನಡುವೆ ಮಣ್ಣನ್ನು ತುಂಬಬೇಕಾಗಿದ್ದು, ಎರಡು ಮನೆಗಳ ಜಾಗವನ್ನು ಸ್ವಾಧೀನ ಮಾಡಿಕೊಳ್ಳಬೇಕಿದೆ. ಈ ಪ್ರಕ್ರಿಯೆಯನ್ನು ಕೂಡಲೇ ಆರಂಭ ಮಾಡುವಂತೆ ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಗೆಯೇ ಮೇಕ್ರಿ ವೃತ್ತದಿಂದ ಬಿಡಿಎ ಜಂಕ್ಷನ್‌ವರೆಗಿನ ಬಳ್ಳಾರಿ ರಸ್ತೆಯನ್ನು ಅಗಲೀಕರಣ ಮಾಡುವ ಬಗ್ಗೆಯೂ ಡಿಸಿಎಂ ಚರ್ಚೆ ನಡೆಸಿದರು. ಸುಮಾರು 4 ಕಿ.ಮೀ ಉದ್ದದ ಈ ರಸ್ತೆಯನ್ನು ಅಗಲೀಕರಣ ಮಾಡುವುದರಿಂದ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಇದರಿಂದ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ ತಪ್ಪಿ ಸುಲಭ ಸಂಚಾರಕ್ಕೆ ಪೂರಕವಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಕೆಲಸವನ್ನು ಕೈಗೆತ್ತಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಮಲ್ಲೇಶ್ವರಂದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುವ ಸಂಗತಿಯನ್ನು ಪಾಲಿಕೆ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಡಿಸಿಎಂ ಗಮನಕ್ಕೆ ತಂದರು. ಸಿಡಿಪಿ ಪ್ಲ್ಯಾನ್‌ಗೆ ಪಾಲಿಕೆಯಿಂದ ಒಪ್ಪಿಗೆ ಪಡೆಯದೇ ಸಂಸ್ಥೆಯು ಕಟ್ಟಡವನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಪಾಲಿಕೆ ನೋಟಿಸ್ ನೀಡಿದೆ, ಆದರೂ ಕಾಮಗಾರಿ ಮುಂದುವರೆದಿದೆ. ಮತ್ತೊಮ್ಮೆ ಸ್ವತಃ ತಾವೇ ನೋಟಿಸ್ ಕೊಡುವುದಾಗಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಉಪ ಮುಖ್ಯಮಂತ್ರಿಗೆ ತಿಳಿಸಿದರು.
ಇಡೀ ನಗರದಲ್ಲಿ ಐದು ಲಕ್ಷ ಎಲ್‌ಇಡಿ ಬೀದಿ ದೀಪಗಳನ್ನು ಪಾಲಿಕೆ ವತಿಯಿಂದ ಅಳವಡಿಸಲಾಗುತ್ತಿದ್ದು, ಮುಂಬರುವ ಆರು ತಿಂಗಳಲ್ಲಿ ಒಂದು ಲಕ್ಷ ದೀಪಗಳನ್ನು ಅಳವಡಿಸಲಾಗುವುದು. ಇದು ಸಂಪೂರ್ಣವಾಗಿ ಸೆಂಟ್ರಲೈಸ್ಡ್ ವ್ಯವಸ್ಥೆ ಹೊಂದಿರುತ್ತದೆ. ಏಕಕಾಲದಲ್ಲಿ ಆಫ್ ಅಂಡ್ ಆನ್ ಮಾಡಬಹುದು. ಮಲ್ಲೇಶ್ವರಂದಲ್ಲೂ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಆ ಬಗ್ಗೆಯೂ ಡಿಸಿಎಂ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಓದಿ : ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಮೇಲೆ ಫೈರಿಂಗ್
ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು ಎಂದು ಡಿಸಿಎಂ ಸೂಚಿಸಿದರು. ಬೆಂಗಳೂರು ಜಲಮಂಡಳಿ ಅಧ್ಯಕ್ಷ ಜಯರಾಂ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.