ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವ ಆರೋಪದಡಿ ಜೈಲು ಸೇರಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ರಾಗಿಣಿ, ಸಂಜನಾ ಹಾಗೂ ಪ್ರಶಾಂತ್ ರಾಂಕಾ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಇಂದು ಮಧ್ಯಾಹ್ನ ಪ್ರಕಟಿಸಿತು.
ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆಯುತ್ತಿರುವ ವಿಚಾರ ಪರಿಗಣಿಸಿ, ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ತಿರಸ್ಕರಿಸಿದೆ.
ಡ್ರಗ್ಸ್ ಸರಬರಾಜು ಮಾಡಿರುವ ಆರೋಪದಡಿ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಆರೋಪಿತ ನಟಿಯರನ್ನು ಸೆಪ್ಟೆಂಬರ್ 4ರಂದು ಬಂಧಿಸಿದ್ದರು. ಆ ಬಳಿಕ 10 ದಿನಗಳ ಕಾಲ ವಿಚಾರಣೆ ನಡೆಸಿ, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಹೀಗೆ ಸೆಪ್ಟೆಂಬರ್ 14ರಂದು ನಟಿಯರು ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದರು.
ಜೈಲು ಸೇರಿದ ಬಳಿಕ ಆರೋಪಿಗಳು ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಎನ್‌ಡಿಪಿಎಸ್ ಸ್ಪೆಷಲ್ ಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರಕರಣ ಗಂಭೀರವಾಗಿದೆ ಹಾಗೂ ವಿಚಾರಣೆ ಹಂತದಲ್ಲಿದೆ ಎಂಬ ಆಧಾರದಲ್ಲಿ ವಿಚಾರಣಾ ನ್ಯಾಯಾಲಯ ಸೆಪ್ಟೆಂಬರ್ 28ರಂದು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು. ಬಳಿಕ ಆರೋಪಿಗಳು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಸುದೀರ್ಘ ವಾದ ಪ್ರತಿವಾದ ಆಲಿಸಿ ಅಕ್ಟೋಬರ್ 24 ರಂದು ತೀರ್ಪು ಕಾಯ್ದಿರಿಸಿತ್ತು. ವಿಚಾರಣೆ ಸಂದರ್ಭದಲ್ಲಿ ಆರೋಪಿ ನಟಿಯರ ಪರ ವಾದ ಮಂಡಿಸಿದ್ದ ಹಿರಿಯ ವಕೀಲರು, ಅರ್ಜಿದಾರರ ವಿರುದ್ಧ ಯಾವುದೇ ಸಾಕ್ಷ್ಯಾಧಾರವಿಲ್ಲ. ಹಾಗಿದ್ದೂ ನಟಿಯರನ್ನು ಬಂಧಿಸಿರುವುದು ಹಾಗೂ ನ್ಯಾಯಾಂಗ ಬಂಧನದಲ್ಲಿ ಇರಿಸಿರುವುದು ನ್ಯಾಯಸಮ್ಮತವಲ್ಲ ಎಂದು ಪ್ರತಿಪಾದಿಸಿದ್ದರು.
ಪ್ರಾಸಿಕ್ಯೂಶನ್ ಪರ ವಕೀಲರು ವಾದಿಸಿ, ಆರೋಪಿಗಳು ಸಾಕಷ್ಟು ಪ್ರಭಾವಿಗಳಾಗಿದ್ದು ವಿಚಾರಣೆ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಗಳಿವೆ ಎಂದಿದ್ದರು. ಪ್ರಾಸಿಕ್ಯೂಶನ್ ಪರ ವಾದ ಪರಿಗಣಿಸಿರುವ ಹೈಕೋರ್ಟ್ ಇದೀಗ ಆರೋಪಿಗಳಾದ ರಾಗಿಣಿ, ಸಂಜನಾ ಹಾಗೂ ಪ್ರಶಾಂತ್ ರಾಂಕಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇನ್ನು,ಇದೇ ವೇಳೆ ತಲೆ ಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ ಶಿಪಪ್ರಕಾಶ್ ಅಲಿಯಾಸ್ ಚಿಪ್ಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಕಳೆದ 61 ದಿನಗಳಿಂದ ಜೈಲಿನಲ್ಲಿರುವ ರಾಗಿಣಿ, ಸಂಜನಾ ಹಾಗೂ ಇತರೆ ಆರೋಪಿಗಳು ಇದೀಗ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದರಿಂದ ಮತ್ತಷ್ಟು ಕಾಲ ಜೈಲು ವಾಸ ಮುಂದುವರೆಸುವುದು ಅನಿವಾರ್ಯವಾಗಿದೆ. ಜಾಮೀನು ಬೇಕೆಂದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದಾಗಿದೆ.