ಬೆಂಗಳೂರು: ನಾಡಿನ ಹಿರಿಯ ಸಂಸ್ಕೃತ ವಿದ್ವಾಂಸ ಪಂ.ಮಳಗಿ ಜಯತೀರ್ಥಾಚಾರ್ಯ ಅವರಿಗೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ʼಗೌರವ ಡಿ.ಲಿಟ್ʼ ಪದವಿ ಪ್ರದಾನ ಮಾಡಿದರು.
ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆದ ಸಂಸ್ಕೃತ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅರ್ಹ ಪದವೀಧರರಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಿದ ಅವರು, ಪದವಿಗಳನ್ನು ಸ್ವೀಕರಿಸಿದ ಎಲ್ಲರಿಗೂ ಶುಭ ಹಾರೈಸಿದರು.
ಪಂ.ಮಳಗಿ ಜಯತೀರ್ಥಾ ಚಾರ್ಯರು ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದು, ಮಾತುಂಗಾದ ಮಾವುಲಿ ವಿದ್ಯಾ ಪೀಠದಲ್ಲಿ ಶಾಸ್ತ್ರಗಳನ್ನೂ ಅಧ್ಯಯನ ಮಾಡಿದ್ದರು. ಅವರ ಸಾಧನೆಯ ಬಗ್ಗೆ ಡಿಸಿಎಂ ಹರ್ಷ ವ್ಯಕ್ತಪಡಿಸಿದರು.
ಬಳಿಕ ಸಂಸ್ಕೃತ ಪಂಡಿತ ಎಸ್.ಕಣ್ಣನ್ ಅವರಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಿದರು. 30 ಮಂದಿಗೆ ಪಿಹೆಚ್ಡಿ ಪದವಿ ಹಾಗೂ 43 ಮಂದಿಗೆ ಎಂ.ಫಿಲ್ ಪದವಿಯನ್ನು ನೀಡಲಾಯಿತು.
ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸ್ವಾಮಿ ಅತ್ಮಪ್ರಿಯಾನಂದರು ಕೋಲ್ಕತ್ತಾದಿಂದಲೇ ವರ್ಚುಯಲ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು. ಕೋವಿಡ್ ಕಾರಣಕ್ಕೆ ಅವರು ಅಲ್ಲಿಂದಲೇ ಭಾಗಿಯಾದರು.