ಬೆಂಗಳೂರು: ಉಗ್ರರ ನಂಟಿನ ಶಂಕೆ ಮೇರೆಗೆ ಸಮಿಯುದ್ದೀನ್ನನ್ನು ಸಿಸಿಬಿ ಪೊಲೀಸರು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈತ 2016 ರ ರುದ್ರೇಶ್ ಮರ್ಡರ್ ಪ್ರಕರಣ, ಹಾಗೆ ಇತರ ಪ್ರಕರಣ ಸಂಬಂಧ ಜೈಲು ಸೇರಿದಾಗ ಜೈಲಿನ ಇತರ ಆರೋಪಿಗಳ ಜೊತೆ ಒಡನಾಟ ಇಟ್ಟುಕೊಂಡಿದ್ದಾನೆ. ಹಾಗೆ ಪರಪ್ಪನ ಅಗ್ರಹಾರದಲ್ಲಿ ರುದ್ರೇಶ್ ಕೊಲೆ ಮಾಡಿದ ಆರೋಪಿಗಳನ್ನ ಪದೇ ಪದೆ ಭೇಟಿಯಾಗುತ್ತಿರುವುದರ ಬಗ್ಗೆ ಜೈಲಿನ ಕೆಲ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಅಲ್ಲದೇ ಜೈಲಿನ ಸಿಸಿಟಿವಿಯಲ್ಲಿ ಸೆರೆಯಾದ ವ್ಯಕ್ತಿಗೂ, ಸಮಿಯುದ್ದೀನ್ಗೂ ತಾಳೆಯಾಗಿದೆ. ಸಿಸಿಟಿವಿ ದೃಶ್ಯ ಹಾಗೂ ಫೋಟೋವನ್ನ ಎಫ್ಎಸ್ಎಲ್ ಟೆಕ್ನಿಕಲ್ ಟೀಂಗೆ ರವಾನೆ ಮಾಡಲಾಗಿದೆ. ಜೈಲಿನಲ್ಲಿ ಆಗಾಗ್ಗೆ ಭೇಟಿಯಾಗುವ ಕಾರಣ ಏನು, ಘಟನೆಯಲ್ಲಿ ಈತ ಕೂಡ ಇದ್ದಾನೆಯೇ, ಈತನ ಪಾತ್ರ ಏನು ಅನ್ನೋದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ.
ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಕೆಲ ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇವರನ್ನ ಈಗಾಗಲೇ ಎನ್ಐಎ ತನಿಖೆ ನಡೆಸುತ್ತಿದೆ. ಅಲ್ಲದೇ ಮುಂಬೈ ನಂಟಿನ ಬಗ್ಗೆಯೂ ಸಿಸಿಬಿಗೆ ಕೆಲ ಮಾಹಿತಿ ಸಿಕ್ಕಿದ್ದು, ಈ ಸಂಬಂಧ ಅಲ್ಲಿನ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಸದ್ಯ ಸಮಿಯುದ್ದೀನ್ ಬಹುತೇಕವಾಗಿ ಉಗ್ರರ ಜೊತೆ ನಂಟು ಹೊಂದಿರುವ ಕಾರಣ ಎಲ್ಲ ಆಯಾಮದಲ್ಲಿ ತನಿಖೆ ಮಾಡಲಾಗುತ್ತಿದೆ.