ಬೆಂಗಳೂರು: ಮಾದಕ ವಸ್ತುಗಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳ ಮೂಲದ ಆರೋಪಿ ರಿಜೇಶ್ ರವೀಂದ್ರನ್ ಎಂಬುವರಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಮುಂದಿನ ಆರು ತಿಂಗಳಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ, ಸೂಕ್ತ ಆದೇಶ ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿದೇರ್ಶನ ನೀಡಿದೆ. ಕೇರಳದ ತ್ರಿಶ್ಯೂರ್ನ ನಿವಾಸಿ ರಿಜೇಶ್ ರವೀಂದ್ರನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಆರೋಪಿ ಕೇರಳ ಮೂಲದವರಾಗಿದ್ದು ಜಾಮೀನು ಮಂಜೂರು ಮಾಡಿದ್ದಲ್ಲಿ ನಾಪತ್ತೆಯಾಗುವ ಸಾಧ್ಯತೆಯಿದೆ. ಇಲ್ಲವಾದರೆ, ವಿಚಾರಣೆಗೆ ಸಹಕರಿಸದಿರಬಹುದು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಆರೋಪಿಗೆ ಜಾಮೀನು ನಿರಾಕರಿಸಿದೆ. ಜೊತೆಗೆ, ಪ್ರಕರಣದ ವಿಚಾರಣೆಯನ್ನು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳಿಸಿ ಸೂಕ್ತ ಆದೇಶವನ್ನು ನೀಡಬೇಕು. ಇಲ್ಲವಾದಲ್ಲಿ ಅರ್ಜಿದಾರರು ಜಾಮೀನು ಕೋರಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಬಹುದಾಗಿದೆ ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಎನ್ಸಿಬಿಯ ಗುಪ್ತಚರ ಅಧಿಕಾರಿಗೆ 2020ರ ಆಗಸ್ಟ್ 21 ರಂದು ಲಭ್ಯವಾದ ಮಾಹಿತಿಯೊಂದಿಗೆ ಕಲ್ಯಾಣ ನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್ ಮೇಲೆ ದಾಳಿ ನಡೆಸಿ ಮಹ್ಮದ್ ಅನೂಫ್ ಎಂಬುವರನ್ನು ಬಂಧಿಸಿ, 100 ಗ್ರಾಂ ಎಂಡಿಎಂನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ: ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ: ಆತ್ಮಹತ್ಯೆಗೂ ಪ್ರಚೋದನೆಗೂ ಸಾಕಷ್ಟು ಅಂತರವಿದೆ ಎಂದು ಪ್ರಕರಣ ರದ್ದು ಪಡಿಸಿ ಹೈಕೋರ್ಟ್ ಆದೇಶ
ಈ ಸಂಬಂಧ ವಿಚಾರಣೆ ಮುಂದುವರೆಸಿದಾಗ ಕೇರಳ ಮೂಲದ ರಿಜೇಶ್ ರವೀಚಂದ್ರನ್ ಎಂಬುವರಿಂದ 40 ಗ್ರಾಮ್ ಎಂಡಿಎಂನ್ನು ಖರೀದಿ ಮಾಡಿರುವುದಾಗಿ ಮಹಮ್ಮದ್ ಅನೂಪ್ ವಿವರಿಸಿದ್ದರು. ಇದರ ಆಧಾರದಲ್ಲಿ ಜಕ್ಕೂರಿನ ಚೊಕ್ಕನಹಳ್ಳಿಯ ಅಪಾರ್ಟ್ಮೆಂಟ್ವೊಂದರ ಮೇಲೆ ದಾಳಿ ನಡೆಸಿ, ಅರ್ಜಿದಾರರಿಂದ 40 ಗ್ರಾಂ ಎಂಡಿಎಂಎ ಮತ್ತು 180 ಗ್ರಾಂ ಎಲ್ಎಸ್ಡಿ ಮಾದಕ ವಸ್ತುಗಳೊಂದಿಗೆ ಅವರನ್ನು ವಶಕ್ಕೆ ಪಡೆದಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯ ಅರ್ಜಿದಾರರನ್ನು ನ್ಯಾಯಾಂಗ ಬಂಧನಕ್ಕೆ ವಹಿಸಿತ್ತು.
ರಿಜೇಶ್ ರವಿಚಂದ್ರನ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಈ ಹಿಂದೆ ಹೈಕೋರ್ಟ್ ವಜಾಗೊಳಿಸಿ ಆದೇಶಿಸಿತ್ತು. ಇದೀಗ ಎರಡನೇ ಬಾರಿ ಅರ್ಜಿದಾರ ಹೈಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ತನಿಖಾಧಿಕಾರಿಗಳ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರ ವಾಣಿಜ್ಯ ಬಳಕೆಗೆ ಅಗತ್ಯವಿರುವಷ್ಟು ಮಾದಕ ವಸ್ತುಗಳನ್ನು ತಮ್ಮಲ್ಲಿಟ್ಟುಕೊಂಡಿದ್ದರು. ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಈಗಾಗಲೇ ಇದೇ ನ್ಯಾಯಾಲಯ ವಜಾಗೊಳಿಸಿದೆ. ಅರ್ಜಿದಾರರಿಗೆ ಜಾಮೀನು ನೀಡಿದಲ್ಲಿ ಸಾಕ್ಷ್ಯಗಳ ನಾಶಕ್ಕೆ ಮುಂದಾಗಲಿದ್ದು, ಮತ್ತೆ ಇದೇ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಜಾಮೀನು ನಿರಾಕರಿಸಬೇಕು ಎಂದು ಕೋರಿದ್ದರು. ಇದನ್ನು ಪುರಸ್ಕರಿಸಿರುವ ನ್ಯಾಯಪೀಠ ಜಾಮೀನು ನಿರಾಕರಿಸಿ ಆದೇಶಿಸಿದೆ.
ಇದನ್ನೂ ಓದಿ: ಕಪಾಳಮೋಕ್ಷ ಮಾಡಿದ್ದ ವ್ಯಕ್ತಿ ಕೊಲೆ ಪ್ರಕರಣ: ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್