ಬೆಂಗಳೂರು: ಇಂದು ಗಣೇಶ ಹಬ್ಬದ ಹಿನ್ನೆಲೆ, ಬೆಳಗ್ಗೆಯಿಂದಲೇ ಗಣಪತಿ ವಿಗ್ರಹಗಳ ಮಾರಾಟ ಜೋರಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಗಣೇಶ ಮೂರ್ತಿಗಳ ಮಾರಾಟ ಹೆಚ್ಚಾಗಿದೆ ಎಂದು ಮಾರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿಷೇಧದ ನಡುವೆಯೂ ಪಿಒಪಿ ಮೂರ್ತಿಗಳ ಮಾರಾಟ
ನಗರದ ಮಾವಳ್ಳಿಯಲ್ಲಿ ಒಂದು ಅಡಿಯಿಂದ ನಾಲ್ಕು ಅಡಿಯವರೆಗಿನ ವಿಘ್ನೇಶ್ವರ ಮೂರ್ತಿಗಳು ಹೆಚ್ಚಾಗಿ ಮಾರಾಟವಾಗುತ್ತಿವೆ. ನಿಷೇಧದದ ನಡುವೆಯೂ ಹಲವು ಕಡೆ ಪಿಒಪಿ ಗಣಪತಿ ಮೂರ್ತಿಗಳ ಮಾರಾಟ ಭರ್ಜರಿಯಾಗೇ ನಡೆಯುತ್ತಿದೆ. ಸರ್ಕಾರ ಪಿಒಪಿ ಗಣೇಶ ಮಾರದಂತೆ ಆದೇಶ ಹೊರಡಿಸಿದ್ದರೂ, ಮಾರಾಟಗಾರರು ಮಾತ್ರ ಎಚ್ಚೆತ್ತುಕೊಂಡಿಲ್ಲ.
ಜನರನ್ನು ಸೆಳೆಯುವ ವಿಭಿನ್ನ ಮೂರ್ತಿಗಳಿಲ್ಲ
ಗಣಪತಿ ತಯಾರಕರ ಮೇಲೂ ಕೊರೊನಾ ಕರಿಛಾಯೆ ಬಿದ್ದಿದೆ. ಈ ಹಿನ್ನೆಲೆ ಕಳೆದ ಬಾರಿಗೆ ಹೋಲಿಸಿದ್ರೆ, ಈ ಬಾರಿ ಯಾವುದೇ ರೀತಿಯ ವಿಭಿನ್ನ ಗಣಪತಿಗಳನ್ನು ತಯಾರಿಸಲಾಗಿಲ್ಲ. ಕಳೆ ಬಾರಿ, ವೈದ್ಯರ ರೂಪದ ಗಣಪ, ಇಸ್ರೋ ಸಾಧನೆ ಬಿಂಬಿಸುವ ಗಣಪ ಹೀಗೆ ವಿವಿಧ ರೀತಿಯ ಗಣಪತಿಗಳನ್ನು ತಯಾರಿಸಲಾಗಿತ್ತು.