ಬೆಂಗಳೂರು: ಪುರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಹನ ಚಾಲಕರು ಮತ್ತಿತರ ನೌಕರರಿಗೆ ಸರ್ಕಾರದಿಂದಲೇ ವೇತನ ನೀಡುವ ಸಂಬಂಧ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ಭರವಸೆ ನೀಡಿದರು.
ಇಂದು ಶೂನ್ಯವೇಳೆಯಲ್ಲಿ ಜೆಡಿಎಸ್ ಶಾಸಕ ಸಾರಾ ಮಹೇಶ್ ಅವರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಈ ವಿಚಾರ ವಿಧಾನ ಪರಿಷತ್ತಿನಲ್ಲಿ ನಿನ್ನೆ ಚರ್ಚೆಗೆ ಬಂದಾಗ ಮುಖ್ಯಮಂತ್ರಿಗಳು ಉತ್ತರ ಕೊಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಸಾರಾ ಮಹೇಶ್, ಸ್ಥಳೀಯ ಸಂಸ್ಥೆಗಳಲ್ಲಿ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರು ಸೇರಿದಂತೆ ಇನ್ನಿತರೆ ನೌಕರರನ್ನು ನೇಮಕ ಮಾಡಿಕೊಳ್ಳುತ್ತಾರೆ. ಆದರೆ, ಸರಿಯಾದ ವೇತನ ನೀಡುವುದಿಲ್ಲ. ಸರ್ಕಾರ ನಿಗದಿಪಡಿಸಿರುವ ವೇತನದಲ್ಲಿ ಏಜೆನ್ಸಿ ಅವರು ಕಡಿತ ಮಾಡಿಕೊಂಡು ನೀಡುತ್ತಾರೆ ಎಂದು ಆರೋಪಿಸಿದರು. ಈ ಬೇಡಿಕೆ ಈಡೇರಿಕೆಗೆ ಕೆಲವು ಸಂಘಟನೆಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸದನದ ಗಮನ ಸೆಳೆದರು.
ರಾಜ್ಯಾದ್ಯಂತ ಮಳೆಯಿಂದ ಹಾಳಾಗಿರುವ ರಸ್ತೆಗಳ ದುರಸ್ಥಿಗೆ ಪಾರದರ್ಶಕವಾಗಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪೌರಾಡಳಿತ ಸಚಿವ ಎನ್.ನಾಗರಾಜ್ ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಅಪ್ಪಚ್ಚು ರಂಜನ್ ಪರವಾಗಿ ಶಾಸಕ ಕೆ.ಜಿ.ಬೋಪಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 14 ಮತ್ತು 15ನೇ ಹಣಕಾಸು ಆಯೋಗಗಳ ಅನುದಾನ, ನಗರೋತ್ಥಾನ ಯೋಜನೆ ಸೇರಿದಂತೆ ವಿವಿಧ ಅನುದಾನಗಳನ್ನು ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯಾನುಸಾರ ಹಾಗೂ ನಿಯಮಾನುಸಾರ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರವಾಹದಿಂದ ಹಾಳಾಗಿರುವ ಕುಶಾಲನಗರದ ರಸ್ತೆಗಳ ದುರಸ್ತಿಗೆ 50 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕುಶಾಲನಗರ ಪರಸಭೆಯ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಎಲ್ಲ ರೀತಿಯ ಅನುದಾನ ನೀಡಲಾಗಿದೆ. ಅಲ್ಲದೇ, ರಸ್ತೆಗಳ ದುರಸ್ತಿಗೆ ಎಸ್.ಎಫ್.ಸಿ ಮುಕ್ತನಿಧಿಯಡಿ 2021-22ನೇ ಸಾಲಿನಲ್ಲಿ 41 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಎಸ್.ಎಫ್.ಸಿ ವಿಶೇಷ ಅನುದಾನದಡಿಯಲ್ಲಿ 2019-20ನೇ ಸಾಲಿನಲ್ಲಿ 100 ಲಕ್ಷ ರೂ. ಬಿಡುಗಡೆಯಾಗಿದೆ. ಸರ್ಕಾರದ ವಿವಿಧ ಯೋಜನೆಯಡಿ ಲಭ್ಯವಾಗುವ ಅನುದಾನದಿಂದ ಆಯಾ ಯೋಜನೆಯ ಮಾರ್ಗಸೂಚಿಯ ಅನ್ವಯ ಕುಶಾಲನಗರ ಪುರಸಭೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಅನುದಾನ ಲಭ್ಯತೆಗೆ ಅನುಗುಣವಾಗಿ ಕೈಗೊಳ್ಳಲಾಗುತ್ತಿದೆ. 14ನೇ ಹಣಕಾಸು ಆಯೋಗದ ಅನುದಾನದಡಿ ಕುಶಾಲನಗರ ಪುರಸಭೆಗೆ 2019- 20ನೇ ಸಾಲಿನ ಮೂಲ ಅನುದಾನ 148 ಲಕ್ಷ ರೂ.ಗಳಲ್ಲಿ ಕಾಮಗಾರಿ ಕೈಗೊಳ್ಳಲು ಮಾರ್ಗಸೂಚಿಸಯಲ್ಲಿ ಸೂಚಿಸಲಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 22.16 ಲಕ್ಷ ರೂ ವೆಚ್ಚ ಮಾಡಿರುವುದಾಗಿ ತಿಳಿಸಿದರು.
15ನೇ ಹಣಕಾಸು ಆಯೋಗದ ಮುಕ್ತ ಅನುದಾನದಡಿ ಕುಶಾಲನಗರ ಪುರಸಭೆಗೆ 2020-21 ಮತ್ತು 2021-22ನೇ ಸಾಲಿನಲ್ಲಿ ಒಟ್ಟು 18.40 ಲಕ್ಷ ರೂ. ಮೀಸಲಿಟ್ಟಿದ್ದು, 17.77 ಲಕ್ಷ ರೂ. ವೆಚ್ಚ ಮಾಡಲಾಗಿದೆ. ನಗರೋತ್ಥಾನ ಯೋಜನೆಯಡಿ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿನ ಕಾಮಗಾರಿಗಳಿಗೆ 2022-23ನೇ ಸಾಲಿನಲ್ಲಿ 100 ಕೋಟಿ ರೂ. ವೆಚ್ಚವಾಗಿದೆ ಎಂದರು.
ಇದನ್ನೂ ಓದಿ: 'ರಾಜಕಾರಣಕ್ಕೆ ದೇವೇಗೌಡರು ಆದರ್ಶ': ವಿದಾಯ ಭಾಷಣದಲ್ಲಿ ಬಿ.ಎಸ್.ಯಡಿಯೂರಪ್ಪ