ಬೆಂಗಳೂರು: ನರ್ಸ್‍ಗಳು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ವೇತನ ಸಿಕ್ಕಿಲ್ಲ ಎಂಬ ದೂರಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಮತ್ತು ಸೋಂಕು ತೊಲಗಿಸುವ ವಿವಿಧ ಕರ್ತವ್ಯಗಳಲ್ಲಿ ನಿರತರಾಗಿರುವ ನರ್ಸ್‍ಗಳು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ರಕ್ಷಣೆ, ಸುರಕ್ಷತೆ ಹಾಗು ಸೂಕ್ತ ವೇತನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಡಾ. ರಾಜೀವ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಆರ್ಟಿಐ) ಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು ಕೆಲವೆಡೆ ನರ್ಸ್ ಮತ್ತು ಆಶಾ ಕಾರ್ಯಕರ್ತೆಯರಿಗೆ ವೇತನ ಸಿಕ್ಕಿಲ್ಲ ಎಂಬ ವಿಚಾರವನ್ನು ಪ್ರಸ್ತಾಪಿಸಿದರು.
ವಕೀಲರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಅರೆ ವೈದ್ಯಕೀಯ ಸಿಬ್ಬಂದಿ ಹಾಗು ಆಶಾ ಕಾರ್ಯಕರ್ತೆಯರ ವೇತನವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸರ್ಕಾರ ಮುಂದಿನ ವಿಚಾರಣೆ ವೇಳೆ ಸ್ಪಷ್ಟನೆ ನೀಡಬೇಕು. ಇಂತಹ ಸಂದರ್ಭದಲ್ಲಿ ಸರ್ಕಾರ ಅರೆ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರನ್ನು ಅವರ ವೇತನದಿಂದ ವಂಚಿತರನ್ನಾಗಿ ಮಾಡುವುದಿಲ್ಲವೆಂದು ನ್ಯಾಯಾಲಯ ನಂಬಿದೆ. ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಲ್ಲಿ ಕಠಿಣ ಆದೇಶ ನೀಡಬೇಕಾಗುತ್ತದೆ ಎಂದು ಪೀಠ ಎಚ್ಚರಿಸಿ, ವಿಚಾರಣೆಯನ್ನು ಏ.24ಕ್ಕೆ ಮುಂದೂಡಿದೆ.