ಬೆಂಗಳೂರು : ಸಚಿವ ಸುರೇಶ್ ಕುಮಾರ್ ಸಕಾಲ ಸೇವೆಗಳಲ್ಲಿ ಸಾಧನೆ ಮಾಡಿರುವ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ವಿತರಿಸಿದರು. ಬಳಿಕ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಮಾತನಾಡಿದರು.
ಬಾಕಿ ಉಳಿಯುವ ಸಕಾಲ ಅರ್ಜಿಗಳ ಸಂಖ್ಯೆಯನ್ನು ಕಡಿಮೆ ಮಾಡಲು, ತಿರಸ್ಕಾರಕ್ಕೆ ಸಕಾರಣಗಳನ್ನು ತಿಳಿಯಲು, ಶೂನ್ಯ ಸ್ವೀಕೃತಿ ಕಚೇರಿಗಳ ಸಂಖ್ಯೆ ತಗ್ಗಿಸಲು, ಅಧಿಕಾರಿಗಳ ಪ್ರೇರಣೆ, ಸಂವೇದನೆಗೆ, ನಾಗರೀಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನ. 30ರಿಂದ 19 ಡಿಸೆಂಬವರೆಗೆ ಮೂರು ಹಂತಗಳಲ್ಲಿ ಇಲಾಖಾವಾರು ಸಕಾಲ ಜಾಗೃತಿ ಸಪ್ತಾಹಗಳನ್ನು ಆಚರಿಸಲಾಯಿತು. ಇದರಲ್ಲಿ ಅಧಿಸೂಚನೆಗೊಂಡ ಎಲ್ಲ 98 ಇಲಾಖೆಗಳು, ಸಂಸ್ಥೆಗಳು ಭಾಗವಹಿಸಿದ್ದವು ಎಂದು ಸಚಿವ ಸುರೇಶ್ ಕುಮಾರ್ ವಿವರಿಸಿದರು.

ಸಕಾಲದ ಕಾಲಮಿತಿಯೊಳಗೆ ಶೇ. 95.45 ಅರ್ಜಿಗಳನ್ನು ವಿಲೇಮಾಡಿದರೆ, ಸಪ್ತಾಹದಲ್ಲಿ 16,05,089 ಅರ್ಜಿಗಳನ್ನು ಸ್ವೀಕರಿಸಲಾಯಿತು. ಸಪ್ತಾಹದ ಸಂದರ್ಭದಲ್ಲಿ ಶೇ. 96.73 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಸಪ್ತಾಹದ ಸಂದರ್ಭದಲ್ಲಿ ತಿರಸ್ಕೃತ ಪ್ರಕರಣಗಳ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಸಪ್ತಾಹಗಳ ಸಮಯದಲ್ಲಿ ಈ ಸಂಖ್ಯೆ ಶೇ. 5.68ರಷ್ಟಿದ್ದರೆ, ಸಕಾಲದ ಸರಾಸರಿ ತಿರಸ್ಕೃತ ಪ್ರಮಾಣ ಶೇ. 6.24 ಇತ್ತು ಎಂದು ಸುರೇಶ್ ಕುಮಾರ್ ವಿವರಿಸಿದರು.

ಸಪ್ತಾಹದ ಸಮಯದಲ್ಲಿ ನಾಗರೀಕರಿಂದ 15,967 ಪ್ರತಿಕ್ರಿಯೆಗಳು ಬಂದಿದ್ದು, ಇದರಲ್ಲಿ ಭಾಗವಹಿಸಿದ ಶೇ. 85.3 ನಾಗರಿಕರಿಗೆ ಸಕಾಲ ಮಿಷನ್ ಕುರಿತು ಗೊತ್ತಿದ್ದರೆ, ಶೇ. 79.3 ಮಂದಿ ಸಕಾಲ ಸೇವೆ ಪಡೆದಿದ್ದಾರೆ. ಶೇ. 74 ಮಂದಿಗೆ ಸಕಾಲ ಜಿ.ಎಸ್.ಸಿ ಸಂಖ್ಯೆಯ ಪ್ರಾಮುಖ್ಯತೆ ತಿಳಿದಿದೆ. ಶೇ. 68ರಷ್ಟು ಮಂದಿಗೆ ಸಕಾಲ ಮೇಲ್ಮನವಿ ಪ್ರಕ್ರಿಯೆಯ ಅರಿವು ಇದೆ ಎಂದು ಹೇಳಿದರು.
ಪ್ರಸ್ತುತ ಯೋಜನೆಯಡಿ 1,807 ಮೇಲ್ಮನವಿಗಳು ಬಾಕಿ ಉಳಿದಿದ್ದು, ಜಿಲ್ಲಾಧಿಕಾರಿಗಳು ಗಮನ ಹರಿಸಿ ಬಾಕಿಯುಳಿದಿರುವ ಮೇಲ್ಮನವಿಗಳನ್ನು ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

2020ರ ನವೆಂಬರ್ನಲ್ಲಿ ಮಂಡ್ಯ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳು, ಡಿಸೆಂಬರ್ನಲ್ಲಿ ಚಿಕ್ಕಬಳ್ಳಾಪುರ, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿವೆ ಎಂದರು.
2021ನೇ ಜನವರಿಯಲ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಚಿಕ್ಕಮಗಳೂರು 67,093 ಸ್ವೀಕಾರ ಮತ್ತು 57,861 ವಿಲೇವಾರಿ, ಚಿಕ್ಕಬಳ್ಳಾಪುರ 72,659 ಸ್ವೀಕಾರ ಮತ್ತು 61,663 ವಿಲೇವಾರಿ ಹಾಗೂ ಶಿವಮೊಗ್ಗ 91,921 ಸ್ವೀಕಾರ ಮತ್ತು ಶೇ. 94 ವಿಲೇವಾರಿ. ಈ ಜಿಲ್ಲೆಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.
ಕಳೆದ ಮೂರು ತಿಂಗಳಿನಲ್ಲಿ ಬೆಂಗಳೂರು ದಕ್ಷಿಣ ತಾಲೂಕು ಪ್ರಥಮ ಸ್ಥಾನದಲ್ಲಿದೆ. ಮೂರು ಬಾರಿಯೂ ಬೆಂಗಳೂರು ನಗರ ಜಿಲ್ಲೆ ಕೊನೆಯ ಸ್ಥಾನವಾದ 30ನೇ ಸ್ಥಾನದಲ್ಲಿದೆ. ಇಲ್ಲಿ 11,876 ಅರ್ಜಿಗಳನ್ನು ಅವಧಿ ಮೀರಿ ಉಳಿಸಿಕೊಳ್ಳಲಾಗಿದೆ. ಇದು ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ದೊಡ್ಡ ಪ್ರಮಾಣದ್ದಾಗಿದೆ. ಬೆಳಗಾವಿ ಜಿಲ್ಲೆ 29ನೇ ಸ್ಥಾನ ಮತ್ತು ಮೈಸೂರು ಜಿಲ್ಲೆ 28ನೇ ಸ್ಥಾನದಲ್ಲಿದೆ ಎಂದು ವಿವರಿಸಿದರು.

ಇದೇ ಆವಧಿಯಲ್ಲಿ ಬೆಂಗಳೂರು ದಕ್ಷಿಣ ತಾಲೂಕು, ಹಾಸನ ತಾಲೂಕು, ಚಿಕ್ಕಬಳ್ಳಾಪುರ ತಾಲೂಕುಗಳು ಹೆಚ್ಚಿನ ಸಂಖ್ಯೆಯ ಅರ್ಜಿ ಸ್ವೀಕರಿಸಿ ನಿಗದಿತ ಅವಧಿಯಲ್ಲಿ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿ ತಾಲೂಕುವಾರು ಮೊದಲ ಮೂರು ಸ್ಥಾನಗಳನ್ನು ಪಡೆದಿವೆ ಎಂದು ವಿವರಿಸಿದರು.
ಡಿಸ್ಟ್ರಿಕ್ಟ್ ಇನ್ಚಾರ್ಜ್ ಸೆಕ್ರೆಟರಿಗಳಿಗೆ ಸಕಾಲ ಅನುಷ್ಠಾನ ಪರಿಶೀಲನಾ ಹೊಣೆ...
ಸಕಾಲ ಯೋಜನೆಯ ಪ್ರಗತಿ ವಿವರ ಕುರಿತು ಸಚಿವರೊಂದಿಗೆ ಪರಿಶೀಲನೆಯಲ್ಲಿ ಭಾಗವಹಿಸಿದ್ದ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್, ಜಿಲ್ಲಾಧಿಕಾರಿಗಳೊಂದಿಗೆ ಸಕಾಲ ಸೇವೆಗಳ ಪ್ರಗತಿಯ ವಿವರ ಪಡೆದು ಅನೇಕ ಕಚೇರಿಗಳಲ್ಲಿ ಶೂನ್ಯ ಅರ್ಜಿ ಸಲ್ಲಿಕೆಯಾಗಿರುವುದನ್ನು ಗಮನಿಸಿದರೆ ಸರ್ಕಾರಿ ಸೇವೆಗಳು ಎಷ್ಟರಮಟ್ಟಿಗೆ ವಿಲೇವಾರಿಯಾಗುತ್ತಿವೆ ಎಂಬ ಕುರಿತು ಆತಂಕ ವ್ಯಕ್ತವಾಗುತ್ತಿದೆ. ಇನ್ನು ಮುಂದೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸಕಾಲ ಯೋಜನೆಗಳ ಕುರಿತು ಸೇವಾವಾರು, ಇಲಾಖಾವಾರು ಮತ್ತು ತಾಲೂಕುವಾರು ಅರ್ಜಿಗಳ ಸ್ವೀಕಾರ, ವಿಲೇವಾರಿ, ತಿರಸ್ಕಾರ ಕುರಿತು ತೀವ್ರಾಗಿ ಗಮನಹರಿಸಲು ಇಂದೇ ಸೂಚನೆ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಮತ್ತು ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಶಿವಪ್ಪ ಎಚ್. ಲಮಾಣಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ಪ್ರದಾನ ಮಾಡಿದರು.
ಈ ಇಬ್ಬರು ಅಧಿಕಾರಿಗಳು ಸಕಾಲ ಯೋಜನೆಯಡಿ ಸೇವೆಗಳನ್ನು ಒದಗಿಸಲು ಕೈಗೊಂಡ ಉತ್ತಮ ಕ್ರಮಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಹಂಚಿಕೊಂಡರು.
ವಿವಿಧ ಜಿಲ್ಲಾಧಿಕಾರಿಗಳು ಯೋಜನೆಯ ಸೇವೆಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಡಿಪಿಎಆರ್ ಇ-ಆಡಳಿತ ಅಪರ ಮುಖ್ಯಕಾರ್ಯದರ್ಶಿ ರಾಜೀವ್ ಚಾವ್ಲಾ, ಸಕಾಲ ಯೋಜನೆ ಮಿಷನ್ ಡೈರೆಕ್ಟರ್ ಡಾ. ಬಿ.ಆರ್. ಮಮತಾ ಭಾಗವಹಿಸಿದ್ದರು.