ಬೆಂಗಳೂರು: ಗುರು ಪೂರ್ಣಿಮೆ ಅಂಗವಾಗಿ ಜೆಪಿ ನಗರದ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ಸಾಯಿ ನಿಜರೂಪದ ಮೇಣದ ಪ್ರತಿಮೆ ಸ್ಥಾಪನೆ ಮಾಡಲಾಗುತ್ತಿದೆ. ಈ ಮೂಲಕ ಭಕ್ತರಿಗೆ ಹೊಸ ಅನುಭವವನ್ನು ನೀಡಲು ಟ್ರಸ್ಟ್ ಮುಂದಾಗಿದೆ.
ಜೆಪಿ ನಗರದ ಶ್ರೀ ಸತ್ಯ ಗಣಪತಿ ಸಾಯಿ ಟ್ರಸ್ಟ್, ಈ ಬಾರಿಯ ಗುರು ಪೂರ್ಣಿಮೆಗೆ ನಗರದ ಜನರಿಗೆ ಅಭೂತಪೂರ್ವ ಅನುಭವ ನೀಡಲು ಸಜ್ಜಾಗಿದೆ. ಶಿರಡಿ ಸಾಯಿ ಬಾಬಾ ಅವರ ಸನ್ನಿಧಾನ ಹೊರತುಪಡಿಸಿದರೆ, ಬೆಂಗಳೂರು ನಗರದಲ್ಲೇ ಅತ್ಯಂತ ವಿಭಿನ್ನ ಹಾಗೂ ವಿಶೇಷವಾದ ಅಲಂಕಾರವನ್ನು ಈ ದೇವಸ್ಥಾನದಲ್ಲಿ ಮಾಡುವ ಜೊತೆಯಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಅವರ ನಿಜರೂಪದ ದರ್ಶನ ನೀಡುವ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಈ ಬಗ್ಗೆ ವಿವರಿಸಿದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ರಾಮ್ ಮೊಹನ ರಾಜ್, ಪ್ರತಿ ಬಾರಿಯೂ ಗುರು ಪೂರ್ಣಿಮೆಯ ಸಂದರ್ಭದಲ್ಲಿ ಭಕ್ತರಿಗೆ ಹೊಸ ಅನುಭವವನ್ನು ನೀಡುವುದು ನಮ್ಮ ಉದ್ದೇಶ. ಅಲ್ಲದೆ ಈ ಬಾರಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ನಗರದ ಭಕ್ತರಿಗೆ ಶಿರಡಿ ಸಾಯಿ ಬಾಬಾ ಅವರ ನಿಜರೂಪದ ದರ್ಶನ ನೀಡಲು, ಜೀವ ಕಳೆಯನ್ನು ಹೊಂದಿರುವ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಿದ್ದೇವೆ ಎಂದರು.
ಈ ಪ್ರತಿಮೆ ಪ್ರತಿಷ್ಠಾಪನೆಯ ಕೋಣೆಯನ್ನು ಸೌಂಡ್ ಪ್ರೂಫ್ ಆಗಿ ನಿರ್ಮಿಸಿದ್ದು, 900 ಅಡಿಗಳ ಅಗಲದ ಧ್ಯಾನ ಮಂದಿರದಲ್ಲಿ ಭಕ್ತರು ತಮ್ಮ ಸಮಯವನ್ನು ಧ್ಯಾನದಲ್ಲಿ ಕಳೆಯಬಹುದಾಗಿದೆ. ವೈಜಾಗ್ನ ಕಲಾಕಾರರೊಬ್ಬರ ಹಸ್ತದಲ್ಲಿ ಅರಳಿರುವ ಈ ಮೇಣದ ಪ್ರತಿಮೆ ನಾಲ್ಕೂವರೆ ಅಡಿಗಳದ್ದಾಗಿದೆ. ಬಂಡೆಗಳ ಮೇಲೆ ಕೂತು ಭಕ್ತರ ಅಳಲನ್ನು ಆಲಿಸುತ್ತಿರುವ ಸಾಯಿ ಬಾಬಾ ಅವರ ಮೂರ್ತಿ ಇದಾಗಿದ್ದು, ಬಹಳಷ್ಟು ಸುಂದರವಾಗಿ ಮೂಡಿಬಂದಿದೆ.
ಇದಲ್ಲದೆ, ದೇವಸ್ಥಾನವನ್ನು ತೆಂಗಿನ ಕಾಯಿ, ಫಲಪುಷ್ಪಾದಿಗಳಿಂದ ಅಲಂಕರಿಸಲಾಗಿದೆ. 20ಕ್ಕೂ ಹೆಚ್ಚು ಕಲಾವಿದರು ಕಳೆದ 7 ದಿನಗಳಿಂದ ಈ ಆಲಂಕಾರವನ್ನು ಮಾಡುತ್ತಿದ್ದು, ಬೇರೆ ಯಾವುದೇ ದೇವಸ್ಥಾನಕ್ಕೂ ಸಾಟಿಯಿಲ್ಲದ ರೀತಿಯಲ್ಲಿ ಆಲಂಕಾರ ಮಾಡಲಾಗಿದೆ.
ಜುಲೈ 16 ರ ಮಂಗಳವಾರದಂದು ಬೆಳಗ್ಗೆ 6 ಗಂಟೆಗೆ ಸಾಮೂಹಿಕ ಅಭಿಷೇಕದಿಂದ ವಿಶೇಷ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ದತ್ತಾತ್ರೇಯ ಅಭಿಷೇಕ, ಫಲಪಂಚಾಮೃತ ಅಭಿಷೇಕ ಮತ್ತು ಸಾಮೂಹಿಕ ಹಾಲಿನ ಅಭಿಷೇಕ ನಡೆಯಲಿದೆ. ಅಲ್ಲದೆ ಸುದರ್ಶನ ಹೋಮ ಮತ್ತು ಸಾಯಿನಾಥ ಹೋಮವನ್ನು ಆಯೋಜಿಸಲಾಗಿದ್ದು, ಮಧ್ಯಾಹ್ನ 12.30 ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.