ಬೆಂಗಳೂರು: ನಗರದ ಪೌರಕಾರ್ಮಿಕರು ಬೆಳಗ್ಗೆ ಆರು ಗಂಟೆಯಿಂದ ಕೆಲಸದಲ್ಲಿದ್ದರೂ ಶೌಚಾಲಯ ಸೌಲಭ್ಯಗಳಿಲ್ಲ. ಕಾಯಿಲೆಗಳಿಗೆ ತುತ್ತಾದರೆ ಹೆಲ್ತ್ ಕಾರ್ಡ್ ಗಳೂ ಇಲ್ಲ ಎಂದು ಪೌರಕಾರ್ಮಿಕರ ಮುಖಂಡರು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶನ್ ಬಳಿ ಅಳಲು ತೋಡಿಕೊಂಡರು.
ನಗರದ ಕೆ.ಕೆ ಗೆಸ್ಟ್ ಹೌಸ್ನಲ್ಲಿ ನಡೆದ ಸಭೆಯಲ್ಲಿ ಪೌರಕಾರ್ಮಿಕರ ಸಂಘಟನೆಗಳ ಮುಖಂಡರು ಹಾಗೂ ಬಿಬಿಎಂಪಿ ಆಯುಕ್ತರು, ಅಧಿಕಾರಿಗಳು ಭಾಗಿಯಾಗಿದ್ದರು. ಪ್ರಮುಖವಾಗಿ ಸರ್ಕಾರ ಘನತ್ಯಾಜ್ಯ ನಿರ್ವಹಣೆಗೆ ಕಂಪನಿ ಮಾಡಲು ಮುಂದಾಗಿದ್ದು, ಕಂಪನಿ ಆರಂಭಿಸಿದರೆ ಸಣ್ಣಪುಟ್ಟ ಟೆಂಡರ್ ಪಡೆದವರು, ಪೌರಕಾರ್ಮಿಕರು ಹಾಗೂ ಅವಲಂಬಿತರಿಗೆ ಸಮಸ್ಯೆ ಆಗಲಿದೆ. ಹೀಗಾಗಿ ಕಂಪನಿ ಆರಂಭಿಸುವ ನಿರ್ಧಾರವನ್ನು ತಡೆ ಹಿಡಿಯಲು ಪೌರಕಾರ್ಮಿಕರ ಮುಖಂಡರು ಮನವಿ ಮಾಡಿದರು.
ನಗರದಲ್ಲಿರುವ ಪೌರಕಾರ್ಮಿಕರಿಗೆ ನಿವೇಶನ ಕೊಟ್ಟಿಲ್ಲ, 11 ವರ್ಷದಿಂದ ಫೈಲ್ ಹಿಡಿದು ಓಡಾಡ್ತಿದ್ದೇವೆ. 2015ರಿಂದ ಅರ್ಜಿ ಸಲ್ಲಿಸಿದರೂ ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ಹಿಂದೆ ಕೊಟ್ಟಿದ್ದ ಮನೆಗಳನ್ನು ರಾಜಕಾಲುವೆ, ಸ್ಮಶಾನ, ಕೆರೆ ಜಾಗದಲ್ಲಿ ಕಟ್ಟಿಸಿ ಕೊಡಲಾಗಿದೆ. ಎಲ್ಲವೂ ಅಪಾಯದ ಸ್ಥಿತಿಯಲ್ಲಿವೆ ಎಂದರು.
ಈ ವೇಳೆ ಪೌರಕಾರ್ಮಿಕರ ಮುಖಂಡ ವೆಂಕಟರಮಣ ಮಾತನಾಡಿ, ಕೇವಲ ರಸ್ತೆ ಗುಡಿಸುವವರನ್ನು ಅಷ್ಟೇ ಪೌರಕಾರ್ಮಿಕರೆಂದು ಪರಿಗಣಿಸಿ ನೇರ ವೇತನ ನೀಡಲಾಗ್ತಿದೆ. ಹಾಗಾಗಿ ಆಟೋ, ಟಿಪ್ಪರ್, ಲಾರಿ ಸಹಾಯಕರು, ಡ್ರೈವರ್ಗಳನ್ನೂ ಕೂಡ ಪೌರಕಾರ್ಮಿಕರೆಂದು ಪರಿಗಣಿಸಬೇಕು. ಅನೇಕ ಪೌರಕಾರ್ಮಿಕರಿಗೆ ಪಿಎಫ್ ಸೌಲಭ್ಯಗಳು ದೊರೆಯುತ್ತಿಲ್ಲ. ಕೆಲಸದ ಅವಧಿಯಲ್ಲಿ ಮೃತಪಟ್ಟವರಿಗೆ ಕೊಡಬೇಕಾದ ಹತ್ತು ಲಕ್ಷ ರೂ. ಪರಿಹಾರ ಹಣವೂ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂದು ಹೇಳಿದರು.
ಓದಿ : ಕೋವಿಡ್ ನಿಮಯ ಉಲ್ಲಂಘಿಸುವವರ ವಿರುದ್ಧ ಯಾಕೆ ಎಫ್ಐಆರ್ ದಾಖಲಿಸುತ್ತಿಲ್ಲ?: ಹೈಕೋರ್ಟ್
ಮತ್ತೋರ್ವ ಮುಖಂಡ ಓಬಳೇಶ್ ಮಾತನಾಡಿ, ರಾಜ್ಯದಲ್ಲಿ ಗುತ್ತಿಗೆ ಪದ್ಧತಿ ರದ್ದಾಗಿರುವುದು ಉತ್ತಮ ವಿಚಾರ. ಆದರೆ, ಕೆಲಸ ಕಾಯಂ ಮಾಡದವರಿಗೆ 45 ವರ್ಷ ಮಿತಿ ನಿಗದಿ ಮಾಡಿದ್ದು ಸರಿಯಲ್ಲ. 45 ವರ್ಷ ಮೇಲ್ಪಟ್ಟವರಿಗೆ ಕಾಯಂ ಕೆಲಸ ಸಿಗುತ್ತಿಲ್ಲ. ವರ್ಷ ಮಿತಿಯನ್ನು 55 ವರ್ಷಕ್ಕೆ ವಿಸ್ತರಿಸರಿಸಬೇಕು. ಕಾಯಂ ಪೌರಕಾರ್ಮಿಕರು ಮತ್ತು ಸಾಮಾನ್ಯ ಪೌರಕಾರ್ಮಿಕರ ವೇತನದಲ್ಲಿ ತಾರತಮ್ಯ ಆಗುತ್ತಿದ್ದು, ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಜೊತೆಗೆ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡುವ ನಿಯಮ ಇದೆ, ಅದೂ ತಲುಪುತ್ತಿಲ್ಲ. ಉನ್ನತ ವಿದ್ಯಾಭ್ಯಾಸ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು. ಎಲ್ಲರ ಮನವಿಗಳನ್ನು ಸ್ವೀಕರಿಸಿದ ಅಧ್ಯಕ್ಷರು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.