ಬೆಂಗಳೂರು: ಹುಳಿಮಾವು ಕೆರೆ ಕಟ್ಟೆ ಒಡೆದು ಇಂದಿಗೆ ಹದಿನೆಂಟು ದಿನಗಳೇ ಕಳೆದಿವೆ. ದಿನದಿಂದ ದಿನಕ್ಕೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆ ಇಂದು ಹುಳಿಮಾವು ಕೆರೆಗೆ ಸದನ ಸಮಿತಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂದು ಅರಗ ಜ್ಞಾನೇಂದ್ರ ಅಧ್ಯಕ್ಷ್ಯತೆಯಲ್ಲಿ ಹುಳಿಮಾವು ಕೆರೆಗೆ ಭೇಟಿ ಕೊಟ್ಟ ಗ್ರಾಮೀಣಾಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಥೆಗಳ ಶಾಸಕಾಂಗ ಸಮಿತಿ, ಕೆರೆ ಕಟ್ಟೆ ಒಡೆದ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿದರು.
ಹುಳಿಮಾವು ಕೆರೆಕಟ್ಟೆ ಒಡೆದ ಪ್ರಕರಣದಲ್ಲಿ ಕೆರೆ ಅಕ್ಕಪಕ್ಕದಲ್ಲಿ ತಲೆ ಎತ್ತಿರುವ ಅಪಾರ್ಟ್ಮೆಂಟ್ ಬಿಲ್ಡರ್ಗಳ ಹಸ್ತಕ್ಷೇಪ ಇರುವ ಬಗ್ಗೆ ಜನಪ್ರತಿನಿಧಿಗಳು ಗರಂ ಆದ್ರು. ಯಾವ ಮಾನದಂಡ ಇಟ್ಟುಕೊಂಡು ಬಫರ್ ಜೋನ್ನಲ್ಲಿ ಅಪಾರ್ಟ್ಮೆಂಟ್ ಕಟ್ಟಲು ಅನುಮತಿ ನೀಡಲಾಗಿದೆ. ಇದು ಅಕ್ರಮವಲ್ಲವೆ? ಅಧಿಕಾರಿಗಳು ಈ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಎಷ್ಟು ಸರಿ ಎಂದು ಬಿಡಿಎ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಸದನ ಸಮಿತಿಯವರು ಕೆರೆ ವೀಕ್ಷಣೆ ವೇಳೆ ಸ್ಥಳೀಯರು ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಬಿಗಿಪಟ್ಟು ಹಿಡಿದರು.