ಬೆಂಗಳೂರು: ವಿಧಾನಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿಗಳಾದ ಎಸ್. ಟಿ. ಸೋಮಶೇಖರ್ ಹಾಗೂ ಬೈರತಿ ಬಸವರಾಜ್ ಮತ್ತು ಅನರ್ಹ ಶಾಸಕ ಮುನಿರತ್ನ ಇಂದು ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದರು.
ಮಠಕ್ಕೆ ಭೇಟಿ ಕೊಟ್ಟು ಶ್ರೀ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್, ನಾನು ಮತ್ತು ಬೈರತಿ ಬಸವರಾಜ್ ಜೊತೆಗೆ ಮುನಿರತ್ನ ಅವರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇವೆ. ಸೋಮವಾರ ನಾವಿಬ್ಬರೂ ನಾಮಪತ್ರ ಸಲ್ಲಿಕೆ ಮಾಡಲಿದ್ದೇವೆ. ಮುನಿರತ್ನ ಅವರು ಬೆಂಬಲ ನೀಡುತ್ತಿದ್ದಾರೆ. ಶ್ರೀಗಳು ಸೋಮವಾರ ಪತ್ರ ಸಲ್ಲಿಸಿದರೆ ಒಳ್ಳೆಯದು ಎಂದು ಹೇಳಿ ಅಭಯ ನೀಡಿದ್ದಾರೆ ಎಂದರು.
ಜಗ್ಗೇಶ್ ಸಹಕಾರ ನೀಡುತ್ತಿಲ್ಲ ಎನ್ನುವ ಮಾತು ತಪ್ಪು. ನಿನ್ನೆ ಕೂಡ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದಾರೆ. ಯಾವ ಕಾರಣಕ್ಕೂ ಅವರಿಗೆ ಬೇಜಾರಾಗಿಲ್ಲ. ನಾನೇ ಅವರಿಗೆ ಕ್ಷೇತ್ರದ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದೇನೆ. ಅವರು ಚಿತ್ರದ ಶೂಟಿಂಗ್ ಕೂಡಾ ಬಿಟ್ಟು, ನನ್ನ ಸಹಕಾರಕ್ಕೆ ನಿಲ್ಲುವ ಭರವಸೆ ನೀಡಿದ್ದಾರೆ ಎಂದರು.
ಚುನಾವಣೆ ಪ್ರಚಾರ ಆರಂಭದ ಕುರಿತು ಮಾತನಾಡಿ, ನಮ್ಮದು ಸದಾ ಚುನಾವಣಾ ಪ್ರಚಾರವೇ. ನಮಗೆ ಚುನಾವಣೆ ಬರಲಿ ಚುನಾವಣೆ ಹೋಗಲಿ. ಕಳೆದ ಆರು ವರ್ಷಗಳಿಂದ ಆಯ್ತು ನಮಗೆ ನಿತ್ಯವೂ ಚುನಾವಣೆ ಇದ್ದಹಾಗೆ ಕ್ಷೇತ್ರದಲ್ಲಿ ನಿರಂತರವಾಗಿ ಮಾಡಿಕೊಂಡಿದ್ದೇವೆ. ಈಗಾಗಲೇ ಕ್ಷೇತ್ರ ಚುನಾವಣಾ ಪ್ರಚಾರ ಆರಂಭಿಸಿದ್ದೇವೆ ಎಂದರು.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು ಮಾತನಾಡಿ, ಸೋಮವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದೇವೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಕ್ಷೇತ್ರದ ಜನತೆ ಅಭಿಮಾನ ಈಗಲೂ ಇದೆ. ನಾವೆಲ್ಲ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸುತ್ತೇವೆ ಎಂದರು.
ಮುನಿರತ್ನ ಮಾತನಾಡಿ, ನನಗೆ ಚುನಾವಣೆ ಇಲ್ಲ. ನನ್ನ ಸ್ನೇಹಿತರಿಬ್ಬರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮಹಾ ಸ್ವಾಮಿಗಳ ಆಶೀರ್ವಾದ ಪಡೆಯಲು ಒಟ್ಟಿಗೆ ಬಂದಿದ್ದೇವೆ. ಸ್ನೇಹಿತರ ಗೆಲುವು ನನ್ನ ಗೆಲುವು ಅವರಿಗಾಗಿ ಹಗಲಿರುಳು ದುಡಿಯುತ್ತೇನೆ ಎಂದು ಹೇಳಿದರು.