ಬೆಂಗಳೂರು : ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನ ಆಘಾತ ತಂದಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಾಲಸುಬ್ರಹ್ಮಣ್ಯಂ ಅವರು ಬಹಳ ದೀರ್ಘ ಕಾಲ ಜೀವನ್ಮರಣದ ಜೊತೆ ಹೋರಾಟ ಮಾಡಿ, ಇವತ್ತು ನಿಧನರಾಗಿದ್ದಾರೆ. ಬಾಲಸುಬ್ರಹ್ಮಣ್ಯಂನವರು ಕರ್ನಾಟಕ, ಆಂಧ್ರ, ತಮಿಳುನಾಡಿಗೆ ಚಿರಪರಿಚಿತ ಸಂಗೀತಗಾರರು. ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಹುಟ್ಟಿದ್ರು ಕೂಡ ಕನ್ನಡ ಸಿನಿಮಾ ಗೀತೆಗಳಿಗೆ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಹಾಡನ್ನ ಹಾಡಿದ್ದಾರೆ, ಜೊತೆಗೆ ದಾಖಲೆಗಳನ್ನ ಮಾಡಿದ್ದಾರೆ ಎಂದರು.
ಬಾಲಸುಬ್ರಹ್ಮಣ್ಯಂ ಆತ್ಮ ಇದ್ದ ಹಾಗೆ, ನಾನು ಶರೀರ ಇದ್ದ ಹಾಗೆ ಅಂತಾ ರಾಜಕುಮಾರ ಹೇಳುತ್ತಿದ್ರು. ಬಹಳ ಜನ ಹಿರಿಯ ನಾಯಕರು ಮಾಡಿದ ಸಿನಿಮಾಗಳಲ್ಲಿ ಇವರು ಹಾಡಿದ್ದಾರೆ. ಸಂಗೀತವಲ್ಲದೆ ಅನೇಕ ಚಿತ್ರಗಳಲ್ಲಿ ಪಾತ್ರಗಳನ್ನ ಕೂಡ ನಿರ್ವಹಿಸಿದ್ದಾರೆ. ಎದೆತುಂಬಿ ಹಾಡುವೆ ಕಾರ್ಯಕ್ರಮದಲ್ಲಿ ಹಲವಾರು ಕನ್ನಡ ಹಾಡುಗಳನ್ನ ಹಾಡಿದ್ದಾರೆ. ಯಾವ ಭಾಷೆಯವರು ಅನೋದು ಮುಖ್ಯವಲ್ಲ, ಭಾವ ಮುಖ್ಯ ಎಂದರು.
ಕೋವಿಡ್ ರೋಗಕ್ಕೆ ತುತ್ತಾಗಿದ್ದರು. ಬಳಿಕ ಕೋವಿಡ್ ಇಲ್ಲ ಎಂದಾಗ ಮತ್ತೆ ಹಾಡುತ್ತಾರೆ ಎಂದು ಎಲ್ಲರಿಗೂ ಆಶಾಭಾವನೆ ಮೂಡಿತ್ತು. ಆದರೆ, ವಿಧಿ ಬಿಡ್ಲಿಲ್ಲ. ಕೋವಿಡ್ ರೋಗದಿಂದ ನಮ್ಮನ್ನ ಅಗಲಿದ್ದಾರೆ. ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. 50 ವರ್ಷಗಳ ಕಾಲ ಹಾಡನ್ನ ಹಾಡಿದ್ದಾರೆ. ಇವತ್ತು ಗಾನ ನಿಲ್ಲಿಸಿದ್ದಾರೆ. ಅವರ ಕುಟುಂಬ ವರ್ಗಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದರು.