ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯ 2021-22ನೇ ಸಾಲಿನ ದ್ವಿತೀಯ ಪಿಯುಸಿಯ ಮಧ್ಯ ವಾರ್ಷಿಕ ಪರೀಕ್ಷೆಯನ್ನು(2nd puc Mid term examination) ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ನವೆಂಬರ್ 29ರಿಂದ ಡಿಸೆಂಬರ್ 10ರವರೆಗೆ ಪರೀಕ್ಷೆ ನಡೆಯಲಿದೆ. ಪಿಯು ಬೋರ್ಡ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆದರೆ, ಪಿಯು ಬೋರ್ಡ್ನ ಈ ನಿರ್ಧಾರಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಪಿಯುಸಿ ಅಡ್ಮಿಷನ್ ಇನ್ನೂ ಮುಗಿದಿಲ್ಲ. ಹೀಗಿರುವಾಗ ಇಷ್ಟು ಬೇಗ ಮಧ್ಯ ವಾರ್ಷಿಕ ಪರೀಕ್ಷೆ(Mid term examination)ನಡೆಸುತ್ತಿರುವುದು ಎಷ್ಟು ಸರಿ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರುಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳೀಕಟ್ಟೆ, ಪಿಯು ಬೋರ್ಡ್(PU board) ಎಕ್ಸಾಂ ಡೇಟ್ ಅನ್ನು ಪ್ರಕಟ ಮಾಡಿದೆ. ಆದರೆ, ಆಡ್ಮಿಷನ್ ಇನ್ನು ಮುಗಿದಿಲ್ಲ, ವಿದ್ಯಾರ್ಥಿಗಳು ಇನ್ನೂ ದಾಖಲಾತಿ ಆಗ್ತಿದ್ದಾರೆ.
ಕಾಲೇಜು ಆರಂಭವಾಗಿ ಮೂರು ತಿಂಗಳು ಕಳೆಯುತ್ತಿದೆ. 45-50ರಷ್ಟು ಪಠ್ಯಕ್ರಮದಲ್ಲಿ ಶೇ.20ರಷ್ಟು ಕೂಡ ಕಲಿತಿಲ್ಲ. ಹೀಗಿರುವಾಗ ಏಕಾಏಕಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಅಂತಾ ತಿಳಿಸಿದರು.
ಪೂರ್ವ ಸಿದ್ಧತೆ ಇಲ್ಲದೇ ಪರೀಕ್ಷೆ : ಸಿಬಿಎಸ್ಸಿ ಅವ್ರು ಪರೀಕ್ಷೆ ಮಾಡುತ್ತಿದ್ದಾರೆ. ಅವ್ರು ಎರಡು ತಿಂಗಳ ಮುಂಚೆಯೇ ಸುತ್ತೋಲೆ ಹೊರಡಿಸಿದ್ದರು. ಇದನ್ನ ಅನುಸರಿಸಲು ಹೋದ ಬೋರ್ಡ್, ಕಳೆದ 8 ದಿನದ ಹಿಂದೆ ಪರೀಕ್ಷೆ ನಡೆಸಲಾಗುವುದು ಅಂತಾ ತಿಳಿಸಿದೆ.
ಪಿಯು ಬೋರ್ಡ್ ಪೂರ್ವ ಸಿದ್ಧತೆಯು ಇಲ್ಲದೇ, ಪರೀಕ್ಷೆ ನಡೆಸುತ್ತಿದೆ. ಆತುರದ ನಿರ್ಧಾರವಿದು ಅಂದರು. ಕೋವಿಡ್ ಮೂರನೇ ಅಲೆ ಭೀತಿ ಇದ್ದರೆ ಪರೀಕ್ಷೆ ನಡೆಸುವುದು ಸರಿ. ಆದರೆ, ಪೂರ್ವ ತಯಾರಿ ಮಾಡುವುದು ಅಗತ್ಯ ಅಂದರು.
ದಿಢೀರ್ ಪರೀಕ್ಷೆ ಮಾಡ್ತಿಲ್ಲ-ನಿರ್ದೇಶಕಿ ಸ್ನೇಹಲ್: ಜುಲೈ 15ಕ್ಕೆ ಕಾಲೇಜು ಶುರುವಾಗಿದ್ದು, ಕೆಲವರು ಕೊರೊನಾ ಭೀತಿಗೆ ದಾಖಲಾತಿ ಮಾಡಿಸಿರಲಿಲ್ಲ. ಯಾವುದೇ ವಿದ್ಯಾರ್ಥಿ ವಿದ್ಯಾಭ್ಯಾಸದಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಅವರಿಗೆಲ್ಲ ಇವತ್ತಿಗೂ ಅಡ್ಮಿಷನ್ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದೀವಿ. ಕಾಲೇಜು ಶುರುವಾಗಿ 4 ತಿಂಗಳು ಕಳೆದಿದ್ದು, ಪರೀಕ್ಷೆ ನಡೆಸುವುದು ಯಾರಿಗೂ ತೊಂದರೆಯುಂಟು ಮಾಡಲ್ಲ ಅಂತಾ ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ತಿಳಿಸಿದರು.
ಶೈಕ್ಷಣಿಕ ವರ್ಷ ಆರಂಭದಲ್ಲೇ ಹೇಗೆ ಇರಲಿದೆ ಅಂತಾ ಉಪನ್ಯಾಸಕರಿಗೂ ಹೇಳಿದ್ದೇವೆ. ನಾಲ್ಕು ಭಾಗದಲ್ಲಿ ಎಷ್ಟು ಸಿಲಬಸ್ ಪೂರ್ತಿ ಮಾಡಬೇಕು, ಯಾವಾಗ ಪರೀಕ್ಷೆ ನಡೆಸಬೇಕು ಎಂಬುದನ್ನೆಲ್ಲ ಮೊದಲೇ ತಿಳಿಸಲಾಗಿದೆ.
ಇದ್ಯಾವುದು ದಿಢೀರ್ ಅಂತಾ ಯಾವುದನ್ನೂ ಮಾಡ್ತಿಲ್ಲ. ಪರೀಕ್ಷೆಯ ಗುಣಮಟ್ಟ ಕಾಪಾಡಲು ರಾಜ್ಯ ಮಟ್ಟದಲ್ಲಿ ಪ್ರಶ್ನೆ ಪತ್ರಿಕೆ ತಯಾರಿ ಮಾಡಿ ಆಯಾ ಜಿಲ್ಲೆಗೆ ಹಂಚುತ್ತಿದ್ದೇವೆ.
ಇದರಿಂದ ಯಾರಿಗೂ ಹೊರೆಯಾಗುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳ ಬರವಣಿಗೆ ಇನ್ನಷ್ಟು ಉತ್ತಮವಾಗಲಿದೆ. ಈ ಮಧ್ಯ ವಾರ್ಷಿಕ ಪರೀಕ್ಷೆಯಿಂದ ವಿದ್ಯಾರ್ಥಿಗಳು ಯಾವುದೇ ಭಯ ಆತಂಕ ಇಲ್ಲದೇ ಅಂತಿಮ ಪರೀಕ್ಷೆಗೆ ತಯಾರಿಯಾದಂತೆ ಆಗುತ್ತೆ ಅಂತಾ ತಿಳಿಸಿದರು.