ಬೆಂಗಳೂರು : ಶಿಕ್ಷಣ ಕ್ಷೇತ್ರದಲ್ಲಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ 4 ದಶಕಗಳಿಗೂ ಹೆಚ್ಚು ಕಾಲ ಹೋರಾಟ ಮಾಡುತ್ತಾ ಬಂದಿರುವ ಮಾಜಿ ಶಿಕ್ಷಣ ಸಚಿವರು ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೈಗೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ 'ರೂಪ್ಸ್ ಕರ್ನಾಟಕ'ವು ಸಂಪೂರ್ಣ ಬೆಂಬಲ ಸೂಚಿಸಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಪರಿಹಾರಕ್ಕಾಗಿ ಉಪವಾಸ ಸತ್ಯಾಗ್ರಹದಲ್ಲಿ ರೂಪ್ಸ್ ಕರ್ನಾಟಕದ ಸಹ ಭಾಗವಹಿಸುತ್ತಿದೆ ಎಂದು ಸಂಘಟನೆ ತಿಳಿಸಿದೆ. ಈ ಬಗ್ಗೆ ರೂಪ್ಸ್ (ನೋಂದಾಯಿತ ಖಾಸಗಿ ಶಾಲೆಗಳ ಸಂಘಟನೆ ಕರ್ನಾಟಕ ) ಅಧ್ಯಕ್ಷರಾದ ಲೋಕೇಶ್ ತಾಳಿಕಟ್ಟೆ ಮಾತನಾಡಿದ್ದು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳು ಉದ್ಭವವಾಗಿದೆ. ಕಾರಣ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರ ಸಾಕಷ್ಟು ತಪ್ಪುಗಳು ಮತ್ತು ತಪ್ಪು ನಿರ್ಧಾರಗಳು ಎಂದು ತಿಳಿಸಿದರು.
ಮಾಜಿ ಶಿಕ್ಷಣ ಸಚಿವರಾದ ಬಸವರಾಜ್ ಹೊರಟ್ಟಿ ಧಾರವಾಡದಲ್ಲಿ ಪ್ರತಿಭಟನಾ ಸತ್ಯಾಗ್ರಹ ನೆಡೆಸುತ್ತಿದ್ದಾರೆ. ಅವರಿಗೆ ನೈತಿಕವಾದ ಬೆಂಬಲವನ್ನು ನೋಂದಾಯಿತ ಕರ್ನಾಟಕ ಖಾಸಗಿ ಶಾಲೆಗಳ ಸಂಘಟನೆ ಸೂಚಿಸುತ್ತದೆ ಎಂದರು.
ನಾವು ಆ ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕೆ ಸಿದ್ಧರಾಗಿದ್ದೇವೆ. ದೂರವಾಣಿ ಕರೆಯಲ್ಲಿ ಈಗಾಗಲೇ ಮಾತನಾಡಿದ್ದೇವೆ. ಭಾನುವಾರದಿಂದ ಅವರ ಜೊತೆ ರಾಜ್ಯದಾದ್ಯಂತ ಧರಣಿ ನಡೆಸುತ್ತೇವೆ ಎಂದರು. ಈಗಿನ ಸರ್ಕಾರ ಸಮಸ್ಯೆಗಳನ್ನು ಹೆಚ್ಚಿಸಿದ್ದು, ಇವುಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸರಿಪಡಿಸುವಂತೆ ಒತ್ತಾಯಿಸುತ್ತೇವೆ.
ಕಳೆದ 25 ವರ್ಷದಿಂದ ಖಾಸಗಿ ಅನುದಾನ ರಹಿತ ಶಾಲೆಗಳು ಅನುದಾನಕ್ಕೆ ಒಳಪಡಲು ಸಾಕಷ್ಟು ಶಾಲೆಗಳು ಅರ್ಹವಾಗಿದ್ದು, ಸಾಕಷ್ಟು ಕಡತಗಳು ಸರ್ಕಾರದ ಬಳಿ ಇದೆ. ತಕ್ಷಣ ಅವುಗಳನ್ನು ಪರಿಗಣಿಸಿ ಅನುದಾನ ಕೊಡಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಲಿಂಗಾಯತರ ಅಭಿವೃದ್ಧಿಗಾಗಿ ಶೇ.18 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲು ಬಸವರಾಜ ಹೊರಟ್ಟಿ ಆಗ್ರಹ