ಬೆಂಗಳೂರು: ಆರ್ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದಲ್ಲಿ 12 ಮಂದಿ ಆರೋಪಿಗಳನ್ನು ದೋಷಿಗಳು ಎಂದು ಘೋಷಿಸಿರುವ ನಗರದ 59ನೇ ಸಿಸಿಹೆಚ್ ನ್ಯಾಯಾಲಯ ನಾಳೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಆರೋಪಿಗಳಾದ ರಂಗಸ್ವಾಮಿ, ಆರ್.ಶಂಕರ್, ರಾಘವೇಂದ್ರ, ಚಂದ್ರ, ಶಂಕರ್, ಉಮಾಶಂಕರ್, ವೇಲು, ಸಿ.ಗೋವಿಂದರಾಜು, ಲೋಗನಾಥ್, ಜಹೀರ್, ಸುರೇಶ್ ಮತ್ತು ಗೌರಮ್ಮ ಅವರನ್ನು ದೋಷಿಗಳು ಎಂದು ಹೇಳಿದೆ.
ಆರ್ಟಿಐ ಕಾರ್ಯಕರ್ತ ಲಿಂಗರಾಜು ಮಾಹಿತಿ ಹಕ್ಕು ಕಾಯಿದೆಯಡಿ ದಾಖಲೆಗಳನ್ನು ಸಂಗ್ರಹಿಸಿ ತನಿಖಾ ಸಂಸ್ಥೆಗಳಿಗೆ ದೂರು ನೀಡುತ್ತಿದ್ದರು. ಪಾಲಿಕೆ ಸದಸ್ಯರಾಗಿದ್ದ ಗೋವಿಂದರಾಜು ಅರೊಂದಿಗೆ ಆಪ್ತವಾಗಿದ್ದರೂ ಅವರ ಭೂ ಅಕ್ರಮ ಕುರಿತಂತೆ 2010ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಬಗ್ಗೆ ಮಾತುಕತೆ ರಾಜಿಗೆ ಗೋವಿಂದರಾಜು ಯತ್ನಿಸಿ ವಿಫಲರಾಗಿದ್ದರು. ಬಳಿಕ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಕುರಿತು ಲಿಂಗರಾಜು ವಕೀಲರೊಬ್ಬರಿಂದ ಪ್ರಮಾಣಪತ್ರ ಮಾಡಿಸಿಟ್ಟಿದ್ದರು.
ಅಜಾದ್ ನಗರ ಪಾಲಿಕೆ ಸದಸ್ಯರಾಗಿದ್ದ ಗೌರಮ್ಮ ಮತ್ತು ಗೋವಿಂದರಾಜು ಅವರ ಅಕ್ರಮ ಸಂಪತ್ತಿನ ಕುರಿತು ದಾಖಲೆಗಳನ್ನು ಸಂಗ್ರಹಿಸಿದ್ದ ಲಿಂಗರಾಜು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ಮಹತ್ವದ ದಾಖಲೆಗಳನ್ನು ಕಲೆಹಾಕಿದ್ದರು. ಇದಾದ ಕೆಲವೇ ದಿನಗಳಲ್ಲಿ 2012ರ ನವೆಂಬರ್ 20 ರಂದು ದೂರುದಾರ ಲಿಂಗರಾಜು ಅವರನ್ನು ವಿಠ್ಠಲ್ ನಗರದ ನಿವಾಸದ ಎದುರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದ್ದ ಹೈಕೋರ್ಟ್, ಘಟನೆಯ ನಿಷ್ಪಕ್ಷಪಾತ ತನಿಖೆಗೆ ಸೂಚಿಸಿತ್ತು. ಅಲ್ಲದೇ, ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಿತ್ತು. ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು, ಅಜಾದ್ ನಗರ ಪಾಲಿಕೆ ಸದಸ್ಯೆ ಗೌರಮ್ಮ, ಪತಿ ಗೋವಿಂದರಾಜು ಸೇರಿ ಲಿಂಗರಾಜು ಹತ್ಯೆಗೆ ಸುಪಾರಿ ನೀಡಿರುವುದನ್ನು ಪತ್ತೆ ಹಚ್ಚಿದ್ದರು.