ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಲು ಮನೆ-ಮನೆ ಸಮೀಕ್ಷೆ ನಡೆಸಬೇಕಾಗಿದ್ದು, ಈ ಕಾರ್ಯವನ್ನು 2020ರ ಏಪ್ರಿಲ್ 30ರೊಳಗೆ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ 2013ರಲ್ಲಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ಸರ್ಕಾರಕ್ಕೆ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿತು. ಆರ್‌ಟಿಇ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕಾದರೆ ಮತ್ತು ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ಸಿಗಬೇಕಾದರೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ನಿಖರವಾಗಿ ಗೊತ್ತಿರಬೇಕು. ಕಾಯ್ದೆಯ ಪ್ರಕಾರ ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 14 ವರ್ಷದೊಳಗಿನ ಮಕ್ಕಳ ಮಾಹಿತಿ ಸಂಗ್ರಹಿಸಬೇಕು. ಇದಕ್ಕಾಗಿ ಮನೆ-ಮನೆ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಬೇಕು ಎಂದು ನಿರ್ದೇಶಿಸಿದ ಹೈಕೋರ್ಟ್ ಪೀಠ, ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿತು.
ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನಗಳು:
1) ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಏಪ್ರಿಲ್ 30ರೊಳಗೆ ಮನೆ-ಮನೆ ಸಮೀಕ್ಷೆ ನಡೆಸಬೇಕು.
2) 14 ವರ್ಷದೊಳಗಿನ ಮಕ್ಕಳ ದಾಖಲೆಗಳನ್ನು ಶೈಕ್ಷಣಿಕ ವರ್ಷಕ್ಕೆ 6 ವಾರ ಮುಂಚಿತವಾಗಿ ತಯಾರಿಸಬೇಕು.
3) ಮನೆ-ಮನೆ ಸಮೀಕ್ಷೆ ಕಾರ್ಯಕ್ಕೆ ಸ್ವಸಹಾಯ ಗುಂಪುಗಳು ಹಾಗೂ ಎನ್‌ಜಿಒಗಳನ್ನು ಬಳಸಿಕೊಳ್ಳಬಹುದು.
4) ಶಿಕ್ಷಣ ಸಂಯೋಜಕರ (ಹಾಜರಾತಿ ಪ್ರಾಧಿಕಾರ) ಖಾಲಿ ಹುದ್ದೆಗಳನ್ನು ಒಂದು ತಿಂಗಳಲ್ಲಿ ಭರ್ತಿ ಮಾಡಬೇಕು.
5) ಶಿಕ್ಷಣ ಸಂಯೋಜಕರನ್ನು ನೇಮಕಗೊಳಿಸಿದ ಬಳಿಕ ಅಗತ್ಯ ತರಬೇತಿ ನೀಡಬೇಕು ಮತ್ತು ಇವರಿಗೆ ಪ್ರಸ್ತುತ ತಿಂಗಳಿಗೆ ನೀಡುವ 500 ರೂ. ಪಾರಿಶ್ರಮಿಕೆಯನ್ನು ಪರಿಶೀಲಿಸಬೇಕು.
6) ಗೈರು ಹಾಜರಾದ ಮಕ್ಕಳ ಪೋಷಕರಿಗೆ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗಲು ಪ್ರಯಾಣ ಭತ್ಯೆ ನೀಡುವುದಿಲ್ಲ ಎಂಬ ನಿರ್ಧಾರವನ್ನು ಸರ್ಕಾರ ಮರು ಪರಿಶೀಲಿಸಬೇಕು.