ಬೆಂಗಳೂರು: ದೇಶದ ಕೊರೊನಾ ಪರಿಸ್ಥಿತಿಯ ಕುರಿತು ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಮತ್ತು ಸಹ ಕಾರ್ಯವಾಹ ಸುರೇಶ್ ಭಯ್ಯಾಜಿ ದೇಶದ ಪ್ರಮುಖ ಸ್ವಾಮೀಜಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು.
ಸಂವಾದದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಶ್ರೀ ಅವದೇಶಾನಂದ ಸ್ವಾಮೀಜಿ, ಶ್ರೀ ಪರಮಾನಂದ ಸ್ವಾಮೀಜಿ ಮತ್ತು ಯೋಗ ಗುರು ಬಾಬಾ ರಾಮ್ ದೇವ್ ಭಾಗವಹಿಸಿದ್ದರು.
ಕೊರೊನಾ ವೈರಸ್ ನಿಯಂತ್ರಿಸಲು ಪರಿಹಾರ ಮಾರ್ಗಗಳು, ಲಾಕ್ ಡೌನ್ನಿಂದಾಗಿ ದೇಶದ ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂವಾದದಲ್ಲಿ ವಿಚಾರ ವಿನಿಮಯ ಮಾಡಲಾಯಿತು. ಉತ್ತಮ ಬೆಳೆ ಬೆಳೆದರೂ ಸೂಕ್ತ ಮಾರುಕಟ್ಟೆ ಇಲ್ಲದೆ ರೈತರು ಕಂಗಾಲಾಗುತ್ತಿರುವುದು, ಕೀಟ-ರೋಗಗಳ ಕಾಟ, ರೈತರು ಸಾಲದ ಸುಳಿಯಲ್ಲಿ ಸಿಲುಕಿರುವುದು, ಬೆಳೆಯನ್ನೇ ನಾಶ ಮಾಡುವ ಅಸಹಾಯಕತೆ ಸೇರಿದಂತೆ ರೈತ ಸಮುದಾಯ ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಸಲಾಯಿತು.
ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಮಾರುಕಟ್ಟೆಯಲ್ಲಿ ಸುಧಾರಣೆ ತರುವುದರ ಜೊತೆಗೆ ಆತ್ಮಸ್ಥೈರ್ಯ ತುಂಬಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ವಿಷಯ ಮಂಡಿಸಿದರು. ವಿವಿಧ ಕ್ಷೇತ್ರಗಳು ಕೊರೊನಾದಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗಗಳ ಬಗ್ಗೆ ಪರಸ್ಪರ ಅಭಿಪ್ರಾಯ ವ್ಯಕ್ತಪಡಿಸಲಾಯಿತು.