ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೀತಿ ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ವಾರ್ಷಿಕ ಅಧಿವೇಶನವಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆಯಲಿದೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಅರುಣ್ ಕುಮಾರ್, ಇದೇ ತಿಂಗಳ 19 ಹಾಗೂ 20ರಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ.
ಈ ರಾಷ್ಟ್ರೀಯ ಸಭೆಯಲ್ಲಿ ಆರ್ಎಸ್ಎಸ್ ಸರಸಂಘ ಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹರಾದ ಭಯ್ಯಾಜಿ ಜೋಶಿ, ಸಹ ಸರ ಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ, ಡಾ. ಮನಮೋಹನ ವೈದ್ಯ, ಭಾಗಯ್ಯ, ಡಾ. ಕೃಷ್ಣ ಗೋಪಾಲ್, ಸುರೇಶ ಸೋನಿ, ಸಿ.ಆರ್.ಮುಕುಂದ ಸೇರಿದಂತೆ ಸಂಘದ ಇನ್ನೂ ಹಲವಾರು ನಾಯಕರುಗಳು ಭಾಗವಹಿಸಲಿದ್ದಾರೆ ಎಂದರು.
ನಾಗಪುರದಲ್ಲಿ ನಡೆಯಬೇಕಿದ್ದ ಈ ಸಭೆಯನ್ನು ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದ್ದು, ದೇಶಾದ್ಯಂತ ವಿವಿಧ ಸಂಘಟನೆಗಳ 450ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕೋವಿಡ್ ನಿಯಮಾವಳಿಗಳ ಪಾಲನೆ ಹಿನ್ನೆಲೆ ಸಭೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನೂ ಕಡಿತಗೊಳಿಸಲಾಗಿದೆ. ಆದರೆ ಆನ್ಲೈನ್ ಮೂಲಕ ನಮ್ಮ ವಿಚಾರಗಳನ್ನು ತಲುಪಿಸಲಾಗುವುದು ಎಂದು ಮಾಹಿತಿ ನೀಡಿದರು.
ದೇಶದೆಲ್ಲೆಡೆ 1 ಲಕ್ಷದ 20 ಸಾವಿರ ಮಂಡಲ್ಗಳಿದ್ದು, ಸದ್ಯ 60ರಿಂದ 65 ಸಾವಿರ ಮಂಡಲ್ ಸಕ್ರಿಯವಾಗಿವೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮಂಡಲ್ ಕಾರ್ಯನಿರ್ವಹಿಸಿ, ಗ್ರಾಮ ಮಟ್ಟದಲ್ಲೂ ತಲುಪುವಂತೆ ಪ್ರಮುಖವಾಗಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಎಂಎಂಎ ಫೈಟ್ನಲ್ಲಿ ಪಾಕ್ಗೆ ಮಣ್ಣು ಮುಕ್ಕಿಸಿದ ಕರುನಾಡ ಫೈಟರ್.. ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ