ಬೆಂಗಳೂರು: ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆ(ಎಬಿಪಿಎಸ್)ಯನ್ನು ನಗರದ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ಸರಸಂಘ ಚಾಲಕ ಡಾ. ಮೋಹನ್ ಭಾಗವತ್ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭ ನಂತರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್ಎಸ್ಎಸ್ ಸಹ ಸರಕಾರ್ಯವಾಹಕ ಡಾ. ಮನಮೋಹನ್ ವೈದ್ಯ, ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ನಿಂದ ಜುಲೈವರೆಗೆ ಶಾಖೆಗಳು ನಡೆಯುತ್ತಿರಲಿಲ್ಲ. ಈಗ ದೇಶದಲ್ಲಿ 55,453 ಶಾಖೆಗಳು ನಡೆಯುತ್ತಿದೆ. ಮುಖ್ಯ ಅಂಶ ಅಂದರೆ ಶೇ77ರಷ್ಟು ಕಾಲೇಜು ವಿದ್ಯಾರ್ಥಿಗಳು ಹಾಗೂ ಶೇ11ರಷ್ಟು ಉದ್ಯೋಗಿಗಳು ಶಾಖೆ ಮಿಲನ್ಗಳಲ್ಲಿ ಭಾಗವಹಿಸುತ್ತಿದ್ದಾರೆ. ಸೇವಾ ಭಾರತಿ ಸಂಘದಿಂದ 73 ಲಕ್ಷ ಮಂದಿಗೆ ದಿನಸಿ ಸೇರಿದಂತೆ ಲಕ್ಷಾಂತರ ಸಂಖ್ಯೆ ಮಾಸ್ಕ್ ವಿತರಣೆ ಕಾರ್ಯ ನಡೆಸಲಾಗಿದೆ ಎಂದು ಕಳೆದ ವರ್ಷದ ಸಂಘದ ಸಾಧನೆಗಳನ್ನ ಹಂಚಿಕೊಂಡರು.
ಎರಡು ವರ್ಷದ ಆರ್ಎಸ್ಎಸ್ ಚಟುವಟಿಕೆ ಅಂಕಿಅಂಶ :
ವರ್ಷ | 2020 | 2021 |
ಸ್ಥಳ | 38,912 | 34,569 |
ಶಾಖೆ | 62,477 | 55,652 |
ಮಿಲನ್ | 20,301 | 18,553 |
ಮಂಡಳಿ | 8,734 | 7,655 |
ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹ:
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ನಿಧಿ ಸಮರ್ಪಣಾ ಅಭಿಯಾನಕ್ಕೆ ದೇಶವ್ಯಾಪಿ ಚೆನ್ನಾಗಿ ಸ್ಪಂದನೆ ಸಿಕ್ಕಿದೆ. ಇಡೀ ದೇಶದ ಜನತೆ ಇದರಲ್ಲಿ ಪಾಲ್ಗೊಳ್ಳಬೇಕು ಎಂಬ ಸದುದ್ದೇಶದಿಂದ ಅಭಿಯಾನ ನಡೆಸಲಾಗಿದೆ. ಭಾರತವನ್ನು ಭಾವನಾತ್ಮಕವಾಗಿ ಏಕರೂಪದಲ್ಲಿ ಜೋಡಿಸುವ ಶಕ್ತಿ ಶ್ರೀರಾಮನಿಗೆ ಇದೆ. ಒಟ್ಟಾರೆಯಾಗಿ ಅಭಿಯಾನದಲ್ಲಿ 5,45,737 ಸ್ಥಾನ ತಲುಪಿದ್ದೆವು. 20 ಲಕ್ಷ ಕಾರ್ಯಕರ್ತರು ಭಾಗವಹಿಸಿದ್ದರು. 12,47,20,000 ಕುಟುಂಬಗಳನ್ನು ತಲುಪಿದ್ದೇವೆ. ವಿಜೋರಾಂ, ಮೇಘಾಲಯ, ಅಂಡಮಾನ್ ದ್ವೀಪ, ಲಡಾಕ್ ಹೀಗೆ ಎಲ್ಲ ಭಾಗಕ್ಕೂ ತಲುಪಿದ್ದೇವೆ ಎಂದರು.
ನಮ್ಮದು ಮಾರ್ಕ್ ಮಾಡುವ ಸಂಸ್ಕೃತಿ ನಮ್ಮದಲ್ಲ. ದೇಣಿಗೆ ಕೊಟ್ಟವರೂ ನಮ್ಮವರೇ, ಕೊಡದವರೂ ನಮ್ಮವರೇ. ದೇಣಿಗೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮನೆ ಬಾಗಲಿಗೆ ಸ್ಟಿಕ್ಕರ್ ಅಂಟಿಸುವ ಸಂಸ್ಕೃತಿ ನಮ್ಮದಲ್ಲ ಎಂದು ಮನಮೋಹನ್ ವೈದ್ಯ ಸ್ಪಷ್ಟನೆ ನೀಡಿದರು.
ಇಂದು ಮತ್ತು ನಾಳೆ ರಾಮಮಂದಿರ ನಿಧಿ ಸಂಗ್ರಹ ಹಾಗೂ ದೇಶದ ಆರ್ಎಸ್ಎಸ್ ಶಾಖೆಗಳ ಪ್ರಗತಿಗಳ ಬಗ್ಗೆ ನಿರ್ಣಯ ಮಂಡನೆ ಆಗಲಿದೆ. ಇದರ ಜೊತೆಗೆ ನಾಳೆ ಎಬಿಪಿಎಸ್ ಚುನಾವಣೆ ನಡೆಯಲಿದ್ದು ನೂತನ ಪದಾಧಿಕಾರಿಗಳ ಆಯ್ಕೆ ಬಗ್ಗೆ ತಿಳಿಸಲಾಗುವುದು.