ಬೆಂಗಳೂರು: ಉಪಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮತ್ತೆ ಹೊಸ ಭರವಸೆ ಮೂಡಿದೆ.
ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕಾರಗೊಳ್ಳುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ದೆಹಲಿಗೆ ತೆರಳಿದ್ದಾರೆ. ಇವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಹಾಗು ಆರ್.ಶಂಕರ್ ಕೂಡ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಇಬ್ಬರು ಪರಿಷತ್ ಸದಸ್ಯರ ದೆಹಲಿ ಪ್ರವಾಸ ಕುತೂಹಲ ಕೆರಳಿಸಿದೆ.
ಹೈಕಮಾಂಡ್ ಭೇಟಿ ಮಾಡಲು ಸಿ.ಟಿ. ರವಿ ದೆಹಲಿಗೆ ತೆರಳಿದ್ದಾರೆ. ಈಗಾಗಲೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದ ಅಧಿಕಾರ ಸ್ವೀಕಾರ ಮಾಡಿರುವ ಸಿ.ಟಿ. ರವಿ ಪೂರ್ಣ ಪ್ರಮಾಣದಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದು, ಈ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ.
ಸಿ.ಟಿ ರವಿ ಜೊತೆ ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ಕೂಡ ದೆಹಲಿಗೆ ತೆರಳಿದ್ದಾರೆ. ಇಬ್ಬರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ಸಂಪುಟ ವಿಸ್ತರಣೆ ವೇಳೆ ಸಚಿವರಾಗುವ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಈಗಾಗಲೇ ಶಂಕರ್ ಸಂಪುಟದಲ್ಲಿ ಇರಲಿದ್ದಾರೆ ಎಂದು ಸಿಎಂ ಹೇಳಿದ್ದು, ವಿಶ್ವನಾಥ್ ಬಗ್ಗೆ ಖಚಿತ ಹೇಳಿಕೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಬೇಡಿಕೆ ಇರಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಸರ್ಕಾರ ರಚನೆಯಲ್ಲಿ ತಮ್ಮ ಪಾತ್ರದ ವಿವರ ನೀಡಿ ಹೈಕಮಾಂಡ್ ನಾಯಕರ ಮನವೊಲಿಸುವ ಪ್ರಯತ್ನ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಗತ್ಯವಿದ್ದರೆ ನ. 11 ರಂದು ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ಅನುಮತಿ ಪಡೆದು ಬರುವುದಾಗಿ ಸಿಎಂ ಹೇಳಿದ್ದರು. ಸಿಎಂ ದೆಹಲಿ ಪ್ರವಾಸಕ್ಕೂ ಮೊದಲೇ ಆಕಾಂಕ್ಷಿಗಳು ದೆಹಲಿಗೆ ಭೇಟಿ ನೀಡಿ ಸಚಿವ ಸ್ಥಾನಕ್ಕೆ ಲಾಬಿಗೆ ಮುಂದಾಗಿದ್ದಾರಾ ಎಂಬ ಪ್ರಶ್ನೆಗಳು ಸಹ ಉದ್ಭವಿಸಿವೆಯಂತೆ.