ಬೆಂಗಳೂರು: ಉಚಿತವಾಗಿ ಊಟ ನೀಡಲು ನಿರಾಕರಿಸಿದ ಫಾಸ್ಟ್ಫುಡ್ ಸೆಂಟರ್ನ ಮಹಿಳಾ ಸಿಬ್ಬಂದಿಗೆ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪದಡಿ ರೌಡಿಶೀಟರ್ ಓರ್ವನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹೊಟೇಲ್ ಮಾಲೀಕರು ನೀಡಿದ ದೂರಿನ ಮೇರೆಗೆ ಜಕ್ಕೂರು ನಿವಾಸಿಯಾಗಿರುವ ಅಮೃತಹಳ್ಳಿ ಪೊಲೀಸ್ ಠಾಣೆ ರೌಡಿಶೀಟರ್ ಮಂಜುನಾಥ್ ಅಲಿಯಾಸ್ ವಾಲೇ ಮಂಜನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಮೃತಹಳ್ಳಿಯ ಜಕ್ಕೂರು ಗ್ರಾಮದ ಸರ್ಕಲ್ ಬಳಿ ವಿಕಾಸ್ ಕುಮಾರ್ ಎಂಬುವರು ನಾರ್ತ್ ಇಂಡಿಯನ್ ಫಾಸ್ಟ್ ಪುಡ್ ಸೆಂಟರ್ ನಡೆಸುತ್ತಿದ್ದಾರೆ. ಕಳೆದ ಜನವರಿ 8ರಂದು ರೌಡಿಶೀಟರ್ ಮಂಜುನಾಥ್ ಎಂಬಾತ ಕುಡಿದ ನಶೆಯಲ್ಲಿ ಹೊಟೇಲ್ ಗೆ ಬಂದು ಉಚಿತವಾಗಿ ಊಟ ಕೊಡಲು ಹೇಳಿದ್ದಾನೆ. ಈ ವೇಳೆ, ಅಲ್ಲಿದ್ದ ಮಾಲೀಕರು ಊಟ ನೀಡಲು ನಿರಾಕರಿಸಿದ್ದಾರೆ. ಈ ವೇಳೆ, ಅಲ್ಲಿ ಕೆಲಸಕ್ಕೆ ಇದ್ದ ರಾಜು ಎಂಬ ಯುವಕನಿಗೆ ನಿಂದಿಸಿದ್ದಲ್ಲದೇ ಆತನಿಗೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಜೊತೆಗೆ ಹೋಟೆಲ್ನಲ್ಲಿದ್ದ ಯುವತಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಲು ಮುಂದಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ನಾರ್ತ್ ಫಾಸ್ಟ್ ಫುಡ್ ಸೆಂಟರ್ ಮಾಲೀಕ ವಿಕಾಸ್ ಕುಮಾರ್ ಭಯಗೊಂಡು ಎರಡು ದಿನ ಹೊಟೇಲ್ ತೆರೆದಿರಲಿಲ್ಲ. ವಿಕಾಸ್ ದೂರಿನನ್ವಯ ಅಮೃತಹಳ್ಳಿ ಪೊಲೀಸರು ಡ್ರೈವರ್ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಗಲಾಟೆ, ದಾಂಧಲೆ ಸೇರಿ ಮೂರು ಅಪರಾಧ ಪ್ರಕರಣ ದಾಖಲಾಗಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿತ್ತು. ಇನ್ನು ಆರೋಪಿಯು ತನಗೆ ಅಸ್ತಮಾ ಇರುವುದರಿಂದ ದೇಹದ ಉಷ್ಣಾಂಶ ಸರಿದೂಗಿಸಲು ಮದ್ಯಸೇವನೆ ಮಾಡುತ್ತಿರುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿತ ಮತ್ತಿನಲ್ಲಿ ಬಿಯರ್ ಬಾಟಲ್ನಿಂದ ವ್ಯಕ್ತಿಗೆ ಹಲ್ಲೆ, ಆರೋಪಿ ಬಂಧನ : ಕಳೆದ ಐದು ದಿನಗಳ ಹಿಂದೆ ಬಿಲ್ ಕೊಡದೆ ಬಾರ್ ಮಾಲೀಕರಿಗೆ ವಂಚಿಸಿ ಪರಾರಿಯಾಗಿ ಬಳಿಕ ಮತ್ತೊಂದು ಬಾರ್ನಲ್ಲಿ ಕ್ಯಾತೆ ತೆಗೆದು ಜಗಳವಾಡಿ ಬಾಟಲ್ನಿಂದ ಹಲ್ಲೆ ನಡೆಸಿದ ಆರೋಪದಡಿ ಯುವಕನೋರ್ವನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದರು. ಬಂಧಿತನನ್ನು ಅನಿಲ್ ಎಂದು ಗುರುತಿಸಲಾಗಿದೆ. ಫರ್ವೇಜ್ ಖಾನ್ ಎಂಬುವರು ಹಲ್ಲೆಯಲ್ಲಿ ಗಾಯಗೊಂಡಿದ್ದರು.
ಕಳೆದ ಡಿಸೆಂಬರ್ 21ರಂದು ಅನಿಲ್ ಮತ್ತು ಆತನ ಮೂವರು ಸ್ನೇಹಿತರು ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದ ಬಳಿಯಿರುವ ಬಾಬಾ ವೈನ್ಸ್ಗೆ ಬಂದಿದ್ದರು. ಕಂಠಪೂರ್ತಿ ಕುಡಿದ ಮೂವರು ಮೂರು ಸಾವಿರ ಬಿಲ್ ಪಾವತಿಸದೇ ಪರಾರಿಯಾಗಲು ಮುಂದಾಗಿದ್ದರು. ಇದನ್ನು ಗಮನಿಸಿದ ಬಾರ್ ಕ್ಯಾಶಿಯರ್ ಬಿಲ್ ಪಾವತಿಸುವಂತೆ ಕೇಳಿದ್ದರು. ಕಾರ್ಡ್ ತೆಗೆದುಕೊಂಡು ಬಂದು ಸ್ವೈಪ್ ಮಾಡಬೇಕು ಎಂದು ಹೊರಟ ಅನಿಲ್ ಬಾಬಾ ವೈನ್ಸ್ನಿಂದ ಸ್ವಲ್ಪ ದೂರದಲ್ಲಿರುವ ಗುರು ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ತೆರಳಿದ್ದ.
ಬಾಬಾ ವೈನ್ಸ್ನಿಂದ ಗುರು ಬಾರ್ ಅಂಡ್ ರೆಸ್ಟೋರೆಂಟ್ಗೆ ಬರುವಾಗ ದಾರಿಯಲ್ಲಿ ನಿಂತಿದ್ದ ಪರ್ವೇಜ್ ಖಾನ್ ಎಂಬಾತನ ಜೊತೆ ಅನಿಲ್ ಕಿರಿಕ್ ಮಾಡಿದ್ದ. ಈ ವೇಳೆ ಇಬ್ಬರ ನಡುವಿನ ಮಾತುಕತೆ ವಿಕೋಪಕ್ಕೆ ತಿರುಗಿ ಆರೋಪಿ ಅನಿಲ್ ಪರ್ವೇಜ್ ಖಾನ್ಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದ. ಘಟನೆ ಸಂಬಂಧ ದೂರು ದಾಖಲಿಸಿಕೊಂಡ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಆರೋಪಿ ಅನಿಲ್ ನನ್ನು ಬಂಧಿಸಿದ್ದರು.
ಇದನ್ನೂ ಓದಿ : ಶಿವಮೊಗ್ಗ: ಶಾಲೆಗೆ ಹೊರಟಿದ್ದ 10 ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು