ಬೆಂಗಳೂರು: ಜೈಲಿಗೆ ಹೋಗಿ ಹೊರಬಂದರೂ ಪದೇ ಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಕುಖ್ಯಾತ ರೌಡಿಶೀಟರ್ನನ್ನು ನಗರದ ಬಾಗಲಗುಂಟೆ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಸೋಲದೇವನಹಳ್ಳಿ ಹಾಗೂ ಬಾಗಲಗುಂಟೆ ಪೊಲೀಸ್ ಠಾಣೆಗಳ ರೌಡಿಶೀಟರ್ ಚೇತನ್ ಕುಮಾರ್ ಆಲಿಯಾಸ್ ಚಿಕ್ಕ ಚೇತುನನ್ನು ಗೂಂಡಾ ಕಾಯ್ದೆಯಡಿ ಜೈಲಿಗಟ್ಟಲಾಗಿದೆ. ಈತನ ವಿರುದ್ಧ ಅನ್ನಪೂರ್ಣೆಶ್ವರಿ ನಗರ, ಮಾದನಾಯಕಹಳ್ಳಿ, ಸೋಲದೇವನಹಳ್ಳಿ ಹಾಗೂ ಚಂದ್ರಾಲೇಔಟ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ ಹಾಗೂ ದರೋಡೆ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
2012ರಿಂದ 2022ರವರೆಗೆ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಜೈಲಿಗೆ ಹೋಗಿ ಹೊರಬಂದು ಮತ್ತೆ ಕ್ರೈಂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಹಲವು ಬಾರಿ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದರೂ ಗೈರಾಗಿದ್ದ. ರೌಡಿಸಂ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ಚೇತುನನ್ನು ಇತ್ತೀಚೆಗೆ ಸೋಲದೇವನಹಳ್ಳಿ ಪೊಲೀಸರು ಕೊಲೆಯತ್ನ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಇದನ್ನೂ ಓದಿ: ಮೂರು ಸಾವಿರ ರೂ.ಗಾಗಿ ಬೀದಿ ರಂಪಾಟ: ಚಾಕುವಿನಿಂದ ಹಲ್ಲೆಗೆ ಯತ್ನ VIDEO