ಬೆಂಗಳೂರು: ಇಂದು ನಗರದಲ್ಲಿ ರೌಡಿಗಳಿಗೆ ಪೊಲೀಸರು ನಿದ್ದೆಗೆಡಿಸಿದ್ದಾರೆ. ಬೆಳ್ಳಂಬೆಳಗ್ಗೆ ಪ್ರಾರಂಭವಾದ ರೌಡಿಶೀಟರ್ಸ್ ಮನೆಗಳ ದಾಳಿಗಳಲ್ಲಿ ವಿಭಾಗದ ಡಿಸಿಪಿಗಳು ಅಖಾಡಕ್ಕೆ ಇಳಿದಿದ್ದು, ರೌಡಿಗಳ ಬೆವರಿಳಿಸಿದ್ದಾರೆ. ಕೆಲವು ವಿಭಾಗದಲ್ಲಿ ದಾಳಿ ಸಂಬಂಧ ರೌಡಿ ಪರೇಡ್ ಕೂಡ ಆರಂಭವಾಗಿದೆ.
ಬೆಂಗಳೂರು ನಗರ ಪೊಲೀಸ್ ದಾಳಿ ಮುಂದುವರೆದು ನಗರ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ದಾಳಿಗಳಲ್ಲಿ ಈವರೆಗೆ 107 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು 93 ಜನರನ್ನು ವಶಕ್ಕೆ ಪಡೆದಿದ್ದಾರೆ.
ಉತ್ತರ ವಿಭಾಗದಲ್ಲಿ ಕೂಡ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ನೇತೃತ್ವದಲ್ಲಿ ರಿಯಾಜ್ ಪಾಷಾ, ರವಿ ಅಲಿಯಾಸ್ ಗಾರ್ಡನ್ ರವಿ, ಮಂಜುನಾಥ್ ಅಲಿಯಾಸ್ ಕೋಳಿ ಮಂಜ, ಮರ್ದಾನ್ ಅಲಿಯಾಸ್ ಮರ್ದಾನ್ ಖಾನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೈಲೆಂಟ್ ಸುನಿಲ್ ಮತ್ತು ಒಂಟೆ ಮನೆಯ ಮೇಲೆ ದಾಳಿ ಮಾಡಿ ವಿಚಾರಣೆ ಮುಂದುವರೆಸಿದ್ದಾರೆ.
ಪಶ್ಚಿಮ ವಿಭಾಗದ ಪೊಲೀಸರಿಂದ ಒಟ್ಟು 105 ರೌಡಿಗಳ ಮನೆ ಮೇಲೆ ದಾಳಿ ಮಾಡಿ 76 ರೌಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರನ್ನು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ರವಾನಿಸಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಡಿಸಿಪಿ ಸಂಜೀವ್ ಪಾಟೀಲ್ ವಿಚಾರಣೆ ಕೂಡ ನಡೆಸಿದ್ರು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಭೇಟಿ ನೀಡಿ ರೌಡಿಗಳಿಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ವಾರ್ನಿಂಗ್ ಮಾಡಿದ್ರು.
ಪೂರ್ವ ವಿಭಾಗ ಪೊಲೀಸರಿಂದ ಈವರೆಗೆ ಒಟ್ಟು 254 ರೌಡಿಗಳ ಮನೆಗಳ ಮೇಲೆ ದಾಳಿ ನಡೆದಿದ್ದು, ಪೊಲೀಸರು 55 ತಂಡಗಳನ್ನು ರಚನೆ ಮಾಡಿ 188 ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ. ನಟೋರಿಯಸ್ ರೌಡಿ ಶಿವಾಜಿನಗರ ತನ್ವೀರ್ ಮನೆ ಮೇಲೆ ಡಿಸಿಪಿ ಶರಣಪ್ಪ ಮತ್ತು ತಂಡದಿಂದ ದಾಳಿ ನಡೆದಿದ್ದು, ಈ ವೇಳೆ ಮನೆಯಲ್ಲಿದ್ದ ತನ್ವೀರ್ ಸೇರಿ ಒಟ್ಟು 188 ಜನರನ್ನು ವಶಕ್ಕೆ ಪಡೆಯಲಾಗಿದೆ.
ಮೈದಾನದಲ್ಲಿ ಪ್ರಾರಂಭವಾದ ರೌಡಿ ಪರೇಡ್:
ಪೂರ್ವ ವಿಭಾಗದ ಪೊಲೀಸರು ವಶಕ್ಕೆ ಪಡೆದ ರೌಡಿಗಳಿಗೆ ರೌಡಿ ಪರೇಡ್ ಕೂಡ ಇದೀಗ ನಡೆಸುತ್ತಿದ್ದಾರೆ. ಕೆಜಿ ಹಳ್ಳಿಯ ಅಯೋಧ್ಯೆ ಮೈದಾನದಲ್ಲಿ ರೌಡಿ ಪರೇಡ್ ನೆಡೆಯುತ್ತಿದೆ. ಪೂರ್ವ ವಿಭಾಗದ 188 ರೌಡಿಗಳಿಗೆ ಡಿಸಿಪಿ ಶರಣಪ್ಪ ಪರೇಡ್ ನಡೆಸಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.