ರೌಡಿ ಬೇಬಿ ಟೈಟಲ್ನೊಂದಿಗೆ ಬಂದ ತಮಿಳಿನ ಮಾರಿ 2 ಸಿನಿಮಾದ ಹಾಡೊಂದು ಬಹಳ ಜನಪ್ರಿಯತೆ ಪಡೆದಿತ್ತು. ಆ ಹಾಡಿನ ಹೆಚ್ಚಿನ ಜನಪ್ರಿಯತೆಗೆ ಕಾರಣ ಅದಕ್ಕೆ ಹೆಜ್ಜೆ ಹಾಕಿರುವ ಸಾಯಿ ಪಲ್ಲವಿ ಹಾಗೂ ಧನುಷ್ ಅಂತಾನೆ ಹೇಳಬಹುದು. ಈಗ ಆ ಹಾಡಿನ ಸಾಲಿನ ಹೆಸರೇ ಕನ್ನಡ ಸಿನಿಮಾ ಆಗಿದೆ. ಲವ್ವು ಅಂದಮೇಲೆ ನೋವು ಇರಬೇಕು ಎಂದು ಈ ಕನ್ನಡದ ‘ರೌಡಿ ಬೇಬಿ’ ತಿಳಿಸುತ್ತದೆ.
ಈ ಚಿತ್ರದ ಕಥಾ ನಾಯಕ ಎಸ್. ಎಸ್. ರವಿ ಗೌಡ ಜನ್ಮ ದಿನದ ಅಂಗವಾಗಿ ನಿನ್ನೆ ‘ರೌಡಿ ಬೇಬಿ’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಅದನ್ನು ನೆರವೇರಿಸಿಕೊಟ್ಟವರು ನಟ ಹಾಗೂ ನಿರ್ದೇಶನ ರಿಷಬ್ ಶೆಟ್ಟಿಯವರು.
ರೌಡಿ ಬೇಬಿ ಸಿನಿಮಾದಲ್ಲಿ ನಾಯಕ ಎಸ್. ಎಸ್. ರವಿ ಗೌಡ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಾಲೇಜು ವಿದ್ಯಾರ್ಥಿಯಾಗಿ ಹಾಗೂ ಮತ್ತೊಂದು ಬ್ಯೂಸಿನೆಸ್ ಮ್ಯಾನ್ ಆಗಿ ನಟಿಸಿದ್ದಾರೆ. ದಿವ್ಯಾ ರಾವ್ ಹಾಗೂ ಮಹಾರಾಷ್ಟ್ರ ಮೂಲದ ಮಾಡೆಲ್ ಹಿರಾ ಕೌರ್ ಮುಖ್ಯ ಪಾತ್ರಗಳಲ್ಲಿ ಇದ್ದಾರೆ. ಅರುಣ ಬಾಲರಾಜ್, ಅಮಿತ್, ಕೆಂಪೆ ಗೌಡ, ಶ್ರೀನಾಥ್ ವಸಿಷ್ಠ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ಇದ್ದಾರೆ.
ಈ ಚಿತ್ರವನ್ನು ಮಂಗಳೂರು, ಬೆಂಗಳೂರು ಹಾಗೂ ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ‘ರೌಡಿ ಬೇಬಿ’ ಚಿತ್ರದ ಕಥೆ, ರಚನೆ ಹಾಗೂ ನಿರ್ದೇಶನವನ್ನು ರೆಡ್ಡಿ ಕೃಷ್ಣ ಅವರು ನಿರ್ವಹಿಸಿದ್ದಾರೆ. ಎಸ್. ಸಾಮ್ರಾಟ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನ, ಡಾ. ನಾಗೇಂದ್ರ ಪ್ರಸಾದ್, ಸಿಂಪಲ್ ಸುನಿ, ಕಿನಾಲ್ ರಾಜ್ ಗೀತೆಗಳನ್ನು ರಚಿಸಿದ್ದಾರೆ. ಅಭಿಷೇಕ್ .ಎಸ್ ಹಾಗೂ ಎಸ್. ಎ. ಅರ್ಮಾನ್ ರಾಗ ಸಂಯೋಜನೆ ಮಾಡಿದ್ದಾರೆ. ವಾರ್ಫುಟ್ ಸ್ಟುಡಿಯೋ ಅಂಡ್ ಸುಮುಖ ಎಂಟೆರ್ಟೈನರ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.