ಬೆಂಗಳೂರು: ನಗರದಲ್ಲಿ ಮತ್ತೆ ಲಾಂಗು ಮಚ್ಚು ಸದ್ದು ಮಾಡಿವೆ. ಹಾಡಹಗಲೇ ವ್ಯಕ್ತಿವೋರ್ವನನ್ನು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಲು ಯತ್ನಿಸಿರುವ ಪ್ರಕರಣ ಜೆ ಬಿ ನಗರ ಠಾಣಾವ್ಯಾಪ್ತಿಯ ಆನಂದ್ ನಗರದಲ್ಲಿ ಬೆಳಕಿಗೆ ಬಂದಿದೆ.
ಆನಂದ್ ನಗರದ ನಿವಾಸಿ ಗುಳ್ಳಪ್ಪ ಎಂಬುವರ ಮೇಲೆ ಈ ಹಲ್ಲೆ ನಡೆದಿದೆ. ಗುಳ್ಳಪ್ಪ ಅವರು ಮಕ್ಕಳಾದ ವಿಗ್ನೇಶ್, ಉದಯ್ ಜೊತೆ ಕುಟುಂಬ ಸಮೇತ ವಾಸವಾಗಿದ್ರು. ಈ ವೇಳೆ ದಿಢೀರ್ ಬಂದ ಕಿರತಾಕರು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ನೋಡಿ ಆನಂದ್ ನಗರ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಆರೋಪಿ ವೆಂಕಟೇಶ್ ನಡು ರಸ್ತೆಯಲ್ಲೇ ಲಾಂಗ್ ಹಿಡಿದು ಗುಳ್ಳಪ್ಪನನ್ನ ಅಟ್ಟಾಡಿಸಿಕೊಂಡು ಹೋಗಿ ಹೊಡೆದಿದ್ದಾನೆ. ಲಾಂಗ್ ಬೀಸಿದ್ದಕ್ಕೆ ಗುಳ್ಳಪ್ಪನ ತಲೆಗೆ ಬಲವಾದ ಏಟು ಬಿದ್ದಿದೆ. ಈ ವೇಳೆ ತಡೆಯಲು ಬಂದ ಗುಳ್ಳಪ್ಪರ ಮಗನಿಗೂ ಪೆಟ್ಟು ಬಿದ್ದಿದೆ. ಕೂಡಲೇ ಗುಳ್ಳಪ್ಪನನ್ನ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ. ಇನ್ನು ಲಾಂಗ್ ಹಿಡಿದು ಅಟ್ಟಾಡಿಸಿಕೊಂಡು ಹೊಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.