ಬೆಂಗಳೂರು: ಪೊಲೀಸ್ ಠಾಣೆಗೆ ಕಲ್ಲು ಹೊಡೆಯಿರಿ ಎಂದು ಇಸ್ಲಾಂ ಧರ್ಮ ಹೇಳೋದಿಲ್ಲ, ಗಲಭೆ ಪ್ರಕರಣವನ್ನು ಸಹಿಸಲು ಸಾಧ್ಯವಿಲ್ಲ. ಇದನ್ನು ಖಂಡಿಸುವುದಾಗಿ ಮಾಜಿ ಸಚಿವ ರೋಷನ್ ಬೇಗ್ ಹೇಳಿದ್ದಾರೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನಿವಾಸದ ಬಳಿ ಮಾತನಾಡಿದ ರೋಷನ್ ಬೇಗ್, ನಾನು ಮೊದಲ ಬಾರಿ ಶಾಸಕನಾದಾಗ ಪತ್ರಿಕೆಯೊಂದರಲ್ಲಿ ಒಂದು ಆರ್ಟಿಕಲ್ ಬಂತು ಅಂತಾ ಮೆರವಣಿಗೆ ಮಾಡಿ ಗಲಾಟೆ ಮಾಡಿದ್ದರು. ಸದ್ಯ ಈ ಗಲಭೆ ನಡೆದಿದೆ. ಪೊಲೀಸ್ನವರ ಮೇಲೆ ಹಲ್ಲೆ ಮಾಡಿದ್ದಾರೆ, ದಿಢೀರನೆ ಸಾವಿರಾರು ಜನ ಸೇರಿ ಗಲಾಟೆ ಮಾಡ್ತಾರೆ ಅಂದರೆ ಹೇಗೆ? ಇಸ್ಲಾಂ ಧರ್ಮದಲ್ಲಿ ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಎಂದು ಎಲ್ಲೂ ಹೇಳಿಲ್ಲ. ಯಾವಾಗ ಇವರಿಗೆಲ್ಲಾ ಬುದ್ಧಿ ಬರೋದು ಎಂದು ಪ್ರಶ್ನಿಸಿದರು.
ಕೆಲವು ಸಂಘಟನೆಗಳು ಈ ಕೃತ್ಯಕ್ಕೆ ಪ್ರಚೋದನೆ ಕೊಟ್ಟಿವೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ತನಿಖೆ ನಂತರ ಎಲ್ಲವೂ ಬಹಿರಂಗವಾಗಲಿದೆ. ಸತ್ಯ ಹೊರಬರಲಿದೆ. ಇದರ ನಡುವೆ ದೇವಸ್ಥಾನಕ್ಕೆ ಕೆಲ ಮುಸ್ಲಿಂ ಯುವಕರು ಸಂಕೋಲೆ ಹಾಕಿ ಸುತ್ತುವರೆದು ರಕ್ಷಣೆ ಮಾಡಿದ್ದು ಅವರಿಗೆ ನಾನು ಸಲಾಮ್ ಹೇಳುತ್ತೇನೆ ಎಂದರು.