ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ವಿರುದ್ಧ ನೇರವಾಗಿ ಹಾಗೂ ಟ್ವಿಟ್ಟರ್ ಮೂಲಕ ಕಿಡಿಕಾರಿದ್ದ ಮಾಜಿ ಸಚಿವ ರೋಷನ್ ಬೇಗ್ ಹೆಸರು ಇದೀಗ ಐಎಂಎ ಜ್ಯುವೆಲ್ಲರ್ಸ್ ಅವ್ಯವಹಾರದಲ್ಲಿಯೂ ಸಿಲುಕಿ ಇನ್ನಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ಅಲ್ಪಸಂಖ್ಯಾತ ಸಮುದಾಯದಲ್ಲಿ ಸದ್ಯ ರಾಜ್ಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ನಾಯಕ, ಮಾಜಿ ಸಚಿವ ರೋಷನ್ ಬೇಗ್. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡು, ಹಿನ್ನೆಲೆಗೆ ಸರಿದಿದ್ದರು. ಇದೀಗ ಇವರ ಹೆಸರು ಐಎಂಎ ಜ್ಯುವೆಲರ್ಸ್ ಅವ್ಯವಹಾರದಲ್ಲೂ ತಳುಕು ಹಾಕಿಕೊಂಡಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡು ಅವರನ್ನು ಸಂಪೂರ್ಣವಾಗಿ ರಾಜಕೀಯವಾಗಿ ಮುಗಿಸುವ ಯತ್ನ ಆರಂಭವಾಗಿದೆ ಎನ್ನಲಾಗ್ತಿದೆ.
ರೋಷನ್ ಬೇಗ್ ವಿರುದ್ಧ ಮೇಲಿಂದ ಮೇಲೆ ಆಡಿಯೋ ಹಾಗೂ ಕೆಲ ಫೋಟೊಗಳು ಬಿಡುಗಡೆ ಆಗುತ್ತಲೇ ಇದ್ದು, ಇದರಿಂದ ಬೇಗ್ ಇನ್ನಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಪಕ್ಷದ ಹಿರಿಯ ನಾಯಕರ ವಿರುದ್ಧ ದನಿ ಎತ್ತುವ ಮೂಲಕ ಸಮ್ಮಿಶ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರೋಷನ್ ಬೇಗ್‍ಗೆ ಜಮೀರ್ ಪೈಪೋಟಿ?
ಮೈತ್ರಿ ಸರ್ಕಾರದಲ್ಲಿ ಸದ್ಯ ಜಮೀರ್ ಅಹಮದ್ ಸಚಿವರಾಗಿ ಜನಪ್ರಿಯರಾಗುತ್ತಿದ್ದಾರೆ. ಅಲ್ಪಸಂಖ್ಯಾತರು ಸ್ವಾತಂತ್ರ್ಯ ಬಂದ ದಿನದಿಂದಲೂ ಕಾಂಗ್ರೆಸ್ ಬೆಂಬಲಿಗರಾಗಿಯೇ ಗುರುತಿಸಿಕೊಂಡಿದ್ದಾರೆ. ಕೈ ಪಕ್ಷಕ್ಕೆ ಇವರೇ ದೊಡ್ಡ ಮತ ಬ್ಯಾಂಕ್. ಇದೀಗ ಈ ಸಮುದಾಯದ ನಾಯಕತ್ವಕ್ಕೆ ಪೈಪೋಟಿ ಆರಂಭವಾಗಿದ್ದು, ರೋಷನ್ ಬೇಗ್ ಹೆಸರು ಹಿನ್ನೆಲೆಗೆ ಸರಿದಿದ್ದರಿಂದ ಬಹುತೇಕ ಜಮೀರ್ ಮುಂಚೂಣಿಯ ನಾಯಕರಾಗಿದ್ದಾರೆ.
ಮತ್ತೆ ಬೆಳಕಿಗೆ ರೋಷನ್:
ತಿಂಗಳ ಹಿಂದೆ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರನ್ನು ರೋಷನ್ ಬಫೂನ್ ಅಂತ ಕರೆದಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೋಕಸಭೆ ಚುನಾವಣೆಯಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿಲ್ಲ. ಇದರಿಂದ ಇವರು ಪಕ್ಷಕ್ಕೆ ರಾಜೀನಾಮೆ ಕೊಡಬೇಕೆಂದೂ ಆಗ್ರಹಿಸಿದ್ದರು. ಸದ್ಯ ದಿಲ್ಲಿಯಲ್ಲಿರುವ ರೋಷನ್, ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸುವ ಯತ್ನದಲ್ಲಿದ್ದಾರೆ. ಈ ಮಧ್ಯೆ ಐಎಂಎ ಸುಳಿಯಲ್ಲಿ ಅವರು ಸಿಲುಕಿದ್ದು, ಪಕ್ಷದ ಹಿರಿಯರ ವಿರುದ್ಧ ಮಾಡಿದ ಆರೋಪ ಹಾಗೂ ಈಗ ಕೇಳಿಬಂದಿರುವ ಆಡಿಯೋ ಮಾಹಿತಿ ಬಳಸಿಕೊಂಡು ಪಕ್ಷದಲ್ಲಿ ಅವರನ್ನು ಮೂಲೆಗುಂಪು ಮಾಡುವ ಯತ್ನ ಆರಂಭವಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.
ಮಾಜಿ ಕೇಂದ್ರ ಸಚಿವ ಸಿ.ಕೆ. ಜಾಪರ್ ಷರೀಫ್ ನಿಧನದ ನಂತರ ರಾಜಧಾನಿಯಲ್ಲಿ ದೊಡ್ಡ ನಾಯಕರಾಗಿ ಕಂಡುಬಂದವರು ರೋಷನ್ ಬೇಗ್. ರೆಹಮಾನ್ ಖಾನ್ ಕೂಡ ಹಿರಿಯ ನಾಯಕರಾಗಿದ್ದರೂ, ಅವರಿಗಿಂತ ಹೆಚ್ಚಿನ ಜನಪ್ರಿಯತೆಯನ್ನು ಬೇಗ್ ಹೊಂದಿದ್ದರು. ಸಾಮೂಹಿಕವಾಗಿ ಮುಸ್ಲಿಂರ ನೇತೃತ್ವ ವಹಿಸುವ ಶಕ್ತಿಯನ್ನು ರೋಷನ್ ಬೇಗ್ ತೋರಿಸಿದ್ದರು. ಆದರೆ, ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದ ಸಹಜವಾಗಿ ಸಚಿವರಾದ ಜಮೀರ್ ಅಹಮದ್ ಬೆಂಗಳೂರಲ್ಲಿ ಮುಸ್ಲಿಂರ ನಾಯಕರಾಗಿ ಗುರುತಿಸಿಕೊಳ‍್ಳುವ ಪ್ರಯತ್ನ ಆರಂಭಿಸಿದ್ದರು. ಇನ್ನೇನು ಸಮುದಾಯದ ನಾಯಕ ಅನ್ನಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಬಲ ಹೆಜ್ಜೆ ಇಟ್ಟಿದ್ದಾರೆ.
ಏಕಾಏಕಿ ಒಂದಾದ ಮುಸ್ಲಿಂ ನಾಯಕರು:
ಆಂಬಿಡೆಂಟ್ ಪ್ರಕರಣದಲ್ಲೂ ಒಬ್ಬನೇ ಒಬ್ಬ ಮುಸ್ಲಿಂ ಸಮುದಾಯದ ನಾಯಕರಿಂದ ಸ್ಪಂದನೆ ಸಿಕ್ಕಿರಲಿಲ್ಲ. ಆದ್ರೆ, ಐಎಂಎ ವಿಚಾರದಲ್ಲಿ ರೋಷನ್ ಬೇಗ್ ಹೆಸರು ಪ್ರಸ್ತಾಪ ಆದ ತಕ್ಷಣವೇ ಎಚ್ಚೆತ್ತುಕೊಂಡಿರುವ ಮುಸ್ಲಿಂ ಸಮುದಾಯದ ಶಾಸಕರು, ಸಚಿವರು ಹಾಗೂ ರೋಷನ್ ಬೇಗ್ ವಿರೋಧಿಸುತ್ತಿರುವವರೆಲ್ಲ ಒಂದಾಗಿದ್ದಾರೆ. ಈಗಾಗಲೇ ದೆಹಲಿಗೆ ತೆರಳಿರುವ ರೋಷನ್ ಬೇಗ್ ಅಲ್ಲಿ ಬಿಜೆಪಿ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ. ಜತೆಗೆ ಕಾಂಗ್ರೆಸ್ ನಾಯಕರನ್ನೂ ಭೇಟಿ ಮಾಡಿ ಚರ್ಚಿಸುತ್ತಿದ್ದಾರೆ ಎನ್ನಲಾಗುತ್ತಿದೆ.