ಬೆಂಗಳೂರು: ನೆಲಮಂಗಲದಿಂದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬಾಳೆಗೆ ಆರಂಭಿಸಿರುವ ‘ರೋಲ್ ಆನ್ ರೋಲ್ ಆಫ್’ (ರೋ ರೋ) ಎಂಬ ಸರಕು ತುಂಬಿದ ಟ್ರಕ್ ಅಥವಾ ಲಾರಿಗಳ ಸಾಗಣೆಯ ರೈಲು ಸೇವೆಯ ಪ್ರಾಯೋಗಿಕ ಸಂಚಾರಕ್ಕೆ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ಕಾರ್ಯಕ್ರಮದ ಮೂಲಕ ನೆಲಮಂಗಲ ರೈಲು ನಿಲ್ದಾಣದಿಂದ ಸಂಚಾರ ಆರಂಭಿಸಿದ ನೂತನ ಸರಕು ಸಾಗಣೆ ಸೇವೆಯ ಪ್ರಾಯೋಗಿಕ ರೋ ರೋ ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಸಿ. ಅಂಗಡಿ, ಕಂದಾಯ ಸಚಿವ ಆರ್.ಆಶೋಕ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ರೋಲ್ ಆನ್ ರೋಲ್ ಆಫ್: ಸರಕು ತುಂಬಿದ ಟ್ರಕ್ ಅಥವಾ ಲಾರಿಗಳನ್ನು ತೆರೆದ ರೈಲಿನ ವ್ಯಾಗನ್‌ಗಳ ಮೇಲೆ ನಿಲುಗಡೆ ಮಾಡಿ ನಿಗದಿತ ಸ್ಥಳಕ್ಕೆ ಸಾಗಿಸುವುದಕ್ಕೆ ‘ರೋಲ್ ಆನ್ ರೋಲ್ ಆಫ್’ ಎಂದು ಹೆಸರಿಡಲಾಗಿದೆ. ನೆಲಮಂಗಲದಿಂದ ಸೊಲ್ಲಾಪುರದ ಬಾಳೆಗೆ (682 ಕಿ.ಮೀ 17 ತಾಸು ಸಂಚಾರ) ಈ ಸೇವೆ ಆರಂಭಿಸಲಾಗುತ್ತಿದೆ. ಈ ರೈಲು 43 ತೆರೆದ ವ್ಯಾಗನ್ ಹೊಂದಿದ್ದು, 42ಕ್ಕೂ ಅಧಿಕ ಸರಕು ತುಂಬಿದ ಟ್ರಕ್ ಅಥವಾ ಲಾರಿಗಳನ್ನು ಸಾಗಿಸಲಿದೆ. ಈ ಲಾರಿಗಳಲ್ಲಿ ಚಾಲಕ ಹಾಗೂ ಕ್ಲೀನರ್ ಕುಳಿತೇ ಇರುತ್ತಾರೆ. ಸೊಲ್ಲಾಪುರದಿಂದ ಅವರು ಸಮೀಪದ ಗಮ್ಯ ಸ್ಥಳಕ್ಕೆ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಾರೆ.
ಧರ್ಮಾವರಂ, ಗುಂತಕಲ್, ರಾಯಚೂರು, ವಾಡಿ ಮಾರ್ಗವಾಗಿ ಸೊಲ್ಲಾಪುರದ ಬಾಳೆ ತಲುಪಲಿದೆ. ಅಂದರೆ, ನೈರುತ್ಯ, ಕೇಂದ್ರ ಹಾಗೂ ದಕ್ಷಿಣ ಮಧ್ಯ ರೈಲ್ವೆ ವಲಯಗಳ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಈ ರೈಲು ಸಂಚಾರದಿಂದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ಇಂಧನ ಉಳಿತಾಯ, ಎರಡೂ ರಾಜ್ಯಗಳ ಮಧ್ಯೆ ಅಗತ್ಯ ವಸ್ತುಗಳ ತ್ವರಿತ ಸಾಗಣೆ ಸೇರಿದಂತೆ ಹಲವು ರೀತಿಯ ಉಪಯೋಗ ಆಗಲಿದೆ. ಇಂದು ನೆಲಮಂಗಲದಿಂದ ಹೊರಡಲಿರುವ ಪ್ರಥಮ ರೈಲಿನಲ್ಲಿ 1,260 ಟನ್ ಕೃಷಿ ಉತ್ಪನ್ನಗಳು, ಕೆಮಿಕಲ್, ಕೈಗಾರಿಕೆಗಳಿಗೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸಲಾಗುತ್ತಿದೆ.