ಬೆಂಗಳೂರು: ಕೊವಿಡ್-19ನಿಂದ ರಕ್ಷಣೆ ಹಾಗೂ ತಪಾಸಣಾ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯು ಕೊವಿಡ್-19 ತಪಾಸಣೆಗೆ "ಮಿತ್ರ" ಎಂಬ ರೋಬೊಟ್ ವ್ಯವಸ್ಥೆಯನ್ನು ಪರಿಚಯಿಸಿದೆ.
ಆಸ್ಪತ್ರೆಯ ವೈದ್ಯರು, ನರ್ಸ್‍ಗಳು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಆಸ್ಪತ್ರೆಗೆ ಪ್ರವೇಶಿಸುವ ಸಂದರ್ಭದಲ್ಲಿ ಈ ರೋಬೋಟಿಕ್ ವ್ಯವಸ್ಥೆ ಮೂಲಕ ತಪಾಸಣೆ ನಡೆಸಲಾಗುತ್ತದೆ.
ಕೊವಿಡ್-19 ಲಕ್ಷಣಗಳಾದ ಜ್ವರ, ಕೆಮ್ಮು ಮತ್ತು ಶೀತವಿದ್ದರೆ ಈ ಬಗ್ಗೆ ರೋಬೋಟ್ ಸಂವಹನದ ಮೂಲಕ ಮಾಹಿತಿಯನ್ನು ನೀಡುತ್ತದೆ. ಈ ಉಪಕ್ರಮವು ಆರೋಗ್ಯ ರಕ್ಷಣೆ ಕಾರ್ಯಕರ್ತರು ಸುರಕ್ಷಿತವಾಗಿರುವುದನ್ನು ಖಾತರಿಪಡಿಸುತ್ತದೆ ಮತ್ತು ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುತ್ತದೆ.
ಈ ರೋಬೋಟಿಕ್ ತಪಾಸಣೆ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತಿದೆ. ಮೊದಲ ರೋಬೋಟ್ ಅನ್ನು ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಇಡಲಾಗಿದ್ದು, ಇದು ಒಳ ಬರುವ ವ್ಯಕ್ತಿಗಳ ಉಷ್ಣಾಂಶವನ್ನು ತಪಾಸಣೆ ನಡೆಸಲಿದೆ. ನಂತರ ಕೆಮ್ಮು ಮತ್ತು ಶೀತಕ್ಕೆ ಸಂಬಂಧಿಸಿದ ಲಕ್ಷಣಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತದೆ. ವ್ಯಕ್ತಿಗೆ ಕೆಮ್ಮು ಮತ್ತು ಶೀತದಂತಹ ಯಾವುದೇ ಲಕ್ಷಣಗಳು ಕಂಡು ಬರದಿದ್ದು, ಉಷ್ಣಾಂಶ ಸಾಮಾನ್ಯ ಸ್ಥಿತಿಯಲ್ಲಿದ್ದರೆ ಈ ರೋಬೋಟ್ ಅವರಿಗೆ ಆಸ್ಪತ್ರೆ ಪ್ರವೇಶಿಸುವ ಪಾಸ್ ಪ್ರಿಂಟ್ ಕೊಡುತ್ತದೆ. ಈ ಪಾಸ್‍ನಲ್ಲಿ ತಪಾಸಣೆ ನಡೆಸಿದ ಫಲಿತಾಂಶ, ವ್ಯಕ್ತಿಯ ಹೆಸರು, ಫೋಟೋ ಹೊಂದಿರುತ್ತದೆ.
ಒಂದು ವೇಳೆ ವ್ಯಕ್ತಿಯು ಅಧಿಕ ಉಷ್ಣಾಂಶವನ್ನು ಹೊಂದಿದ್ದರೆ ಅಥವಾ ಕೆಮ್ಮು ಮತ್ತು ಶೀತ ಇರುವುದು ರೋಬೋಟ್ಗೆ ಖಾತರಿಯಾದರೆ ತಪಾಸಣೆ ಪ್ರಕ್ರಿಯೆ ಅನುತ್ತೀರ್ಣವಾಗಿದೆ ಎಂದು ನಮೂದಿಸಿ ಪಾಸ್ ನೀಡುತ್ತದೆ. ಈ ತಪಾಸಣೆ ಫಲಿತಾಂಶದ ಆಧಾರದಲ್ಲಿ ಮುಂದಿನ ರೋಬೋಟ್ ಬಳಿ ಹೋಗುವಂತೆ ಸಲಹೆ ನೀಡಲಾಗುತ್ತದೆ. ಈ ವ್ಯಕ್ತಿಯನ್ನು ಫ್ಲೂ ಕ್ಲಿನಿಕ್‍ನಲ್ಲಿರುವ ವೈದ್ಯರಿಂದ ಹೆಚ್ಚಿನ ತಪಾಸಣೆ ನಡೆಸಲಾಗುತ್ತದೆ. ಇದರ ವಿಶೇಷವೆಂದರೆ ವೈದ್ಯರು ಯಾವುದೇ ದೈಹಿಕ ಸಂಪರ್ಕವಿಲ್ಲದೇ ವ್ಯಕ್ತಿಯನ್ನು ತಪಾಸಣೆ ನಡೆಸಲಿದ್ದಾರೆ.
ಈ ಉಪಕ್ರಮದ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ವಲಯ ನಿರ್ದೇಶಕ ಡಾ.ಮನೀಶ್ ಮಟ್ಟೂ ಮಾತನಾಡಿ, ವಿಶ್ವದಾದ್ಯಂತ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವ ಕಾರ್ಯಕರ್ತರಲ್ಲಿ ಸೋಂಕು ಪ್ರಮಾಣ ಅತ್ಯಧಿಕವಾಗಿದೆ. ಇದು ಕೊವಿಡ್-19 ತಡೆಯುವ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೋಬೋಟಿಕ್ ತಪಾಸಣೆ ಸೂಕ್ತವೆಂದು ನಮಗನಿಸಿತು. ಈ ಹಿನ್ನೆಲೆಯಲ್ಲಿ ನಾವು ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿಯೇ ರೋಗಿಗಳು ಮತ್ತು ಅವರನ್ನು ನೋಡಿಕೊಳ್ಳಲು ಬರುವವರು ಮತ್ತು ನಮ್ಮ ಸಿಬ್ಬಂದಿಯನ್ನು ರೋಬೋಟ್ ಮೂಲಕ ತಪಾಸಣೆ ನಡೆಸುತ್ತಿದ್ದೇವೆ. ಈ ಪ್ರಕ್ರಿಯೆಯಿಂದಾಗಿ ಕೊವಿಡ್-19 ಸೋಂಕು ತಗುಲಿರುವ ಯಾವುದೇ ವ್ಯಕ್ತಿ ಆಸ್ಪತ್ರೆಯ ಒಳಗೆ ಬರಲು ಸಾಧ್ಯವಾಗುವುದಿಲ್ಲ. ನಮ್ಮ ಒಪಿಡಿಗಳನ್ನು ಪುನಾರಂಭ ಮಾಡಲಾಗಿದ್ದು, ಸೋಂಕು ಹರಡುವ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತಿತ್ತು. ಆದರೆ, ಈ ಪ್ರಕ್ರಿಯೆಯು ಮನುಷ್ಯನ ಸಂಪರ್ಕದಿಂದ ಸೋಂಕು ಹರಡುವ ಪ್ರಮಾಣವನ್ನು ಕಡಿಮೆ ಮಾಡಲಿದೆ ಎಂದು ತಿಳಿಸಿದ್ದಾರೆ.