ಬೆಂಗಳೂರು: ಶಿವಾಜಿನಗರ ಬಳಿ ಇರುವ ಫ್ರಂಟ್ಲೈನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದುಬಾರಿ ಬೆಲೆಯ ಸಲಕರಣೆಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಈ ಪ್ರಕರಣ ಇದೇ ತಿಂಗಳ 13 ನೇ ತಾರೀಖಿನಂದು ಬೆಳಕಿಗೆ ಬಂದಿದೆ.
ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ವಂಚನೆ ಎಸಗಿದ ಸಂಸ್ಥೆಗೆ ಸೇರಿದ ಆಸ್ತಿ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದರು. ಈ ವೇಳೆ ಆಸ್ಪತ್ರೆಗೆ ಭೇಟಿ ಕೊಟ್ಟಾಗ ಶಟರ್ಸ್ ಮುರಿದು ದರೋಡೆಯಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಈ ಹಿಂದೆ ಅಧಿಕಾರಿಗಳು ಅಲ್ಲಿರುವ ಸಲಕರಣೆಗಳ ಲೆಕ್ಕ ಹಾಕಿ ಹರಾಜು ಹಾಕಿದ್ದರು. ನವೆಂಬರ್ 2020ರಲ್ಲಿ ಸಲಕರಣೆ ಲೆಕ್ಕ ಪಡೆದಿದ್ದರು. ಈ ಸಂದರ್ಭದಲ್ಲಿ ಹರಾಜಿನಲ್ಲಿ ಬಿಡ್ ಮಾಡಿದವರಿಗೆ ಕೊಡುವ ಪ್ಲಾನ್ ಇತ್ತು. ಆದ್ರೆ ಇದೇ ಸಮಯದಲ್ಲಿ ಕಳ್ಳತನ ನಡೆದಿದ್ದು ಬೆಳಕಿಗೆ ಬಂದಿದೆ.
4 ಸಾವಿರ ಕೋಟಿ ರೂ. ಹಗರಣ ಆಗಿರುವುದು ಬೆಳಕಿಗೆ ಬಂದಾಗ ಐಎಂಎಗೆ ಸಂಬಂಧಪಟ್ಟ ಎಲ್ಲಾ ಬ್ರ್ಯಾಂಚ್ಗಳು ಬಂದ್ ಆಗಿದ್ದವು. ಅದರಂತೆ ಈ ಆಸ್ಪತ್ರೆಯನ್ನು ಕೂಡ ಮುಚ್ಚಲಾಗಿತ್ತು. ಆದ್ರೆ ಯಾವುದೇ ಭದ್ರತೆ ಇರಲಿಲ್ಲ, ಜೊತೆಗೆ ಅಲ್ಲಿ ಸ್ಥಳೀಯ ಸಿಸಿಟಿವಿ ಕೂಡ ಕೆಲಸ ಮಾಡುತ್ತಿರಲಿಲ್ಲ. ಇದನ್ನೇ ದುರ್ಬಳಕೆ ಮಾಡಿಕೊಂಡ ದರೋಡೆಕೋರರು ಅತ್ಯಾಧುನಿಕ ಪೀಠೋಪಕರಣಗಳನ್ನು ಕದ್ದೊಯ್ದಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.