ಬೆಂಗಳೂರು: ಹಣ ದೋಚಲು ಕಳ್ಳತನದ ಕಥೆ ಕಟ್ಟಿ ದೂರು ನೀಡಿದ್ದ ಆರೋಪಿಯನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲರಾಮ್ ಬಂಧಿತ ಆರೋಪಿ. ಜನವರಿ 13ರಂದು ಸಿರ್ಸಿ ವೃತ್ತದ ಬಳಿ ಸಿಸಿಬಿ ಪೊಲೀಸರ ಸೋಗಿನಲ್ಲಿ ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿ 10 ಲಕ್ಷ ರೂ., ಲಪಟಾಯಿಸಿದ್ದಾರೆ ಎಂದು ಆರೋಪಿಸಿ ಮೂಲರಾಮ್ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.
ಪ್ರಕರಣದ ವಿವರ: ಮೆಟ್ರೋ ಶೂ ಹೆಸರಿನ ಅಂಗಡಿ ನಡೆಸುತ್ತಿದ್ದ ಮೂಲರಾಮ್ ವ್ಯವಹಾರದಲ್ಲಿ ನಷ್ಟ ಅನುಭವಿಸಿ ಕಂಗಾಲಾಗಿದ್ದ. ರಮೇಶ್ ಎಂಬಾತ ವಿವಿಧ ಅಂಗಡಿಗಳ ವ್ಯವಹಾರಕ್ಕೆ ನೀಡಿದ್ದ 10 ಲಕ್ಷ ಹಣವನ್ನ ಸಂಗ್ರಹಿಸಿಕೊಂಡು ತಲುಪಿಸುವ ಜವಾಬ್ದಾರಿಯನ್ನ ಈತನಿಗೆ ನೀಡಿದ್ದ. ಹೇಗಾದರೂ ಮಾಡಿ 10 ಲಕ್ಷ ರೂ. ತಾನೇ ಹೊಡೆದುಕೊಳ್ಳಲು ಆರೋಪಿ ಸಂಚು ರೂಪಿಸಿದ್ದ. ಅದರಂತೆ ಮೂಲರಾಮ್ ಹಣವನ್ನು ತನ್ನ ಶೂ ಅಂಗಡಿಯ ಗೋಡೌನಿನಲ್ಲಿ ಬಚ್ಚಿಟ್ಟಿದ್ದ. ಬಳಿಕ ಸಿರ್ಸಿ ಸರ್ಕಲ್ ಬಳಿ ಖಾಲಿ ಬ್ಯಾಗ್ ಬಿಸಾಡಿ, ತನ್ನ ಕೈ ಕೊಯ್ದುಕೊಂಡಿದ್ದ. ನಂತರ ತನ್ನ ಬಳಿಯಿದ್ದ ಹಣ ಲೂಟಿ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದ.
ಕೈ ಮೇಲಿನ ಗಾಯಗಳನ್ನ ನೋಡಿ ಅನುಮಾನಗೊಂಡ ಪೊಲೀಸರು ದೂರುದಾರನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಅಂಗಡಿಯಲ್ಲಿ ಬಚ್ಚಿಟ್ಟಿದ್ದ 10 ಲಕ್ಷ ರೂ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ಶೂ ವ್ಯಾಪಾರಿಯಿಂದ ₹10 ಲಕ್ಷ ದರೋಡೆ
ಅಪಘಾತವೆಸಗಿ ಹಣ ದೋಚಿದ್ದ ಮೂವರ ಬಂಧನ: ಮತ್ತೊಂದು ಪ್ರಕರಣದಲ್ಲಿ ಉದ್ದೇಶ ಪೂರ್ವಕವಾಗಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಿಹಾರ ಕೇಳುವ ನೆಪದಲ್ಲಿ ಹಣ ದೋಚಿದ್ದ ಮೂವರು ಆರೋಪಿಗಳನ್ನು ಕಲಾಸಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಜಿಲಾನ್, ಅಬ್ದುಲ್ ವಹಾಬ್ ಹಾಗೂ ಪೃಥ್ವಿಕ್ ಬಂಧಿತ ಆರೋಪಿಗಳು. ಜ. 10ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿನ್ನ ಖರೀದಿದಾರರಿಂದ ಹಣ ಸಂಗ್ರಹಿಸಿ ಕೊಂಡೊಯ್ಯುತ್ತಿದ್ದ ಕೃಷ್ಣಪ್ಪ ಹಾಗೂ ವರುಣ್ ಸಿಂಗ್ ಎಂಬುವವರ ದ್ವಿಚಕ್ರ ವಾಹನಕ್ಕೆ ಆರೋಪಿಗಳಾದ ಮೊಹಮ್ಮದ್ ಜಿಲಾನ್ ಹಾಗೂ ಅಬ್ದುಲ್ ವಹಾಬ್ ಡಿಕ್ಕಿ ಹೊಡೆದಿದ್ದರು. ಬಳಿಕ ಅಪಘಾತಕ್ಕೆ ಪ್ರತಿಯಾಗಿ ಪರಿಹಾರ ನೀಡುವಂತೆ ವಾಗ್ವಾದ ಆರಂಭಿಸಿದ್ದರು. ಹಿಂಬಾಲಿಸಿಕೊಂಡು ಬಂದಿದ್ದ ಮತ್ತೋರ್ವ ಆರೋಪಿ ಪೃಥ್ವಿಕ್ ವರುಣ್ ಸಿಂಗ್ ಕೈಯಲ್ಲಿದ್ದ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ.
ಹಣ ಕಳೆದುಕೊಂಡಿದ್ದ ಕೃಷ್ಣಪ್ಪ ಹಾಗೂ ವರುಣ್ ತಕ್ಷಣ ಕಲಾಸಿ ಪಾಳ್ಯ ಪೊಲೀಸ್ ಠಾಣೆಗೆ ತೆರಳಿ ತಮ್ಮ 10 ಲಕ್ಷ ರೂ. ದೋಚಲಾಗಿದೆ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಕಲಾಸಿ ಪಾಳ್ಯ ಠಾಣಾ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 62 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ. ದೂರಿನಲ್ಲಿ 10 ಲಕ್ಷ ಎಂದು ಉಲ್ಲೇಖಿಸಿರುವ ವರುಣ್ ಸಿಂಗ್ ನಂತರ 85 ಲಕ್ಷ ದೋಚಲಾಗಿದೆ ಎನ್ನುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸದ್ಯ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಪತ್ನಿಗೆ ವರದಕ್ಷಿಣೆ ಕಿರುಕುಳ: ಜಗಳ ಬಿಡಿಸಲು ಬಂದ ಮಾವನಿಗೆ ಇರಿದು, ಬಾವನ ಕಾಲು ಮುರಿದ ಅಳಿಯ!