ಬೆಂಗಳೂರು: ರಾಜ್ಯ ಸರ್ಕಾರ ಇದೀಗ 35,160.81 ಕೋಟಿ ರೂಪಾಯಿ ಪರಿಷ್ಕೃತ ನೆರೆ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.
ಈ ಮುಂಚೆ ರಾಜ್ಯ ಸರ್ಕಾರ 38,451.11 ಕೋಟಿ ರೂ ನೆರೆ ಹಾನಿ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಈ ಹಾನಿ ವರದಿಯಲ್ಲಿ ಅಧಿಕಾರಿಗಳು ಖಾಸಗಿ ಆಸ್ಪತ್ರೆ, ಶಾಲಾ ಕಟ್ಟಡಗಳನ್ನು ಸೇರಿಸಿದ್ದರು. ಈ ಸಂಬಂಧ ಕೇಂದ್ರ ಗೃಹ ಇಲಾಖೆ ಆಕ್ಷೇಪಣೆ ಸಲ್ಲಿಸಿತ್ತು.
ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಖಾಸಗಿ ಕಟ್ಟಡಗಳನ್ನು ನೆರೆ ಹಾನಿ ಪರಿಹಾರದಲ್ಲಿ ಸೇರಿಸುವ ಹಾಗಿಲ್ಲ. ಹೀಗಾಗಿ ಖಾಸಗಿ ಕಟ್ಟಡಗಳ ಹಾನಿ ಮೊತ್ತವನ್ನು ತೆಗೆದುಹಾಕಿ ಪರಿಷ್ಕೃತ ವರದಿಯನ್ನು ನೀಡುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಹೀಗಾಗಿ ಇದೀಗ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪರಿಷ್ಕೃತ ನೆರೆ ಹಾನಿ ವರದಿ ಸಲ್ಲಿಸಲಿದೆ. ಈ ಹಿಂದೆ ಸಲ್ಲಿಸಲಾಗಿದ್ದ ಮೊತ್ತದಿಂದ 3,290.3 ಕೋಟಿ ರೂ ಕಡಿತಗೊಳಿಸಲಾಗಿದೆ.
ನಾಳೆ ಕಂದಾಯ ಅಧಿಕಾರಿಗಳು ದೆಹಲಿಗೆ ತೆರಳಿ ಕೇಂದ್ರ ಗೃಹ ಇಲಾಖೆಗೆ ಪರಿಷ್ಕೃತ ವರದಿ ಸಲ್ಲಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ರು.