ಬೆಂಗಳೂರು: ಐದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಡ್ರೋಣ್ ಮೂಲಕ ಆಸ್ತಿಗಳ ರೀ ಸರ್ವೇ ಮಾಡಲಾಗುತ್ತಿದ್ದು, ಮುಂದಿನ ಮೂರು ವರ್ಷದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಡ್ರೋಣ್ ಸರ್ವೇ ಕಾರ್ಯ ಮುಗಿಸಿ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 100 ತಾಲೂಕುಗಳಲ್ಲಿ ಕಂದಾಯ ದಾಖಲೆಗಳಿಗೆ ಯುಎನ್ಪಿನ್ ಅಳವಡಿಸಲಾಗಿದೆ. ಸರ್ವೆ ದಾಖಲೆ ಡಿಜಿಟಲ್ಗೆ 10 ಕೋಟಿ ಕೊಡಲಾಗಿದೆ. ಹಳೆ ಕಂದಾಯ ದಾಖಲೆ ಹಾಳಾಗುತ್ತಿದ್ದು, ಅದರ ಡಿಜಿಟಲೀಕರಣ ಮಾಡಲಾಗುತ್ತಿದೆ.
ಇದಕ್ಕಾಗಿ 317 ಸ್ಲ್ಯಾನರ್ ಖರೀದಿಸಲಾಗಿದೆ. ಡ್ರೋಣ್ ಬಳಸಿ ರೀ ಸರ್ವೇ ಕಾರ್ಯ ನಡೆಸಿ, ಗಡಿ ಗುರುತಿಸಿ ದಾಖಲೆ ಮಾಡಲಾಗುತ್ತಿದೆ. ಈಗಾಗಲೇ 5 ಜಿಲ್ಲೆಯಲ್ಲಿ ಮಾಡಲಾಗುತ್ತಿದೆ. ರಾಮನಗರ ಜಿಲ್ಲೆಯ ಡ್ರೋಣ್ ಸರ್ವೇ ಮುಗಿದಿದೆ. ತುಮಕೂರಿನಲ್ಲಿ ಸರ್ವೇ ಆಗುತ್ತಿದೆ. ಬೆಂಗಳೂರಿನಲ್ಲಿಯೂ ಪ್ರಗತಿಯಲ್ಲಿದೆ ಎಂದರು.
ಡಿಜಿಟಲೀಕರಣದ ವೇಳೆ ತಕರಾರುಗಳಿದ್ದಲ್ಲಿ ಪರಿಹಾರಕ್ಕೆ ಈಗಿರುವ ವ್ಯವಸ್ಥೆ ಬದಲಿಸಿ ಇದಕ್ಕಾಗಿ ಮೇಲ್ಮನವಿ ಪ್ರಾಧಿಕಾರ ಪ್ರತ್ಯೇಕವಾಗಿ ರಚಿಸಿದರೆ ಜನರಿಗೆ ಸಮಸ್ಯೆ ಜಾಸ್ತಿಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾಗಿ ಹೊಸದಾಗಿ ಮೇಲ್ಮನವಿ ಪ್ರಾಧಿಕಾರ ರಚಿಸಲ್ಲ ಎಂದರು.
ಕಂದಾಯ ದಾಖಲೆಗಳ ಡಿಜಿಟಲೀಕರಣದಿಂದ ನಮ್ಮದಾಖಲೆ ಡಿಜಿಟಲ್ ಆಗಲಿದೆ. ಎಲ್ಲರ ಆಸ್ತಿ ಗಣಕೀಕೃತವಾಗಲಿದೆ. ಇದಕ್ಕಾಗಿ ಮತ್ತಷ್ಟು ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಲಾಗುತ್ತದೆ. ಮುಂದಿನ ಮೂರು ವರ್ಷದಲ್ಲಿ ಡ್ರೋಣ್ ರೀ ಸರ್ವೇ ಮತ್ತು ಡಿಜಿಟಲೀಕರಣ ಮುಗಿಸಲಾಗುತ್ತದೆ ಎಂದು ಹೇಳಿದರು.
ಉಳುವವರಿಗೆ ಕುಮ್ಕಿ ಕಾನೆಬಾನೆ ಜಾಗ ನೋಂದಣಿಗೆ ಕ್ರಮ: ಸ್ವಾತಂತ್ರ್ಯ ಪೂರ್ವದಿಂದ ಉಳುಮೆ ಮಾಡಿಕೊಂಡು ಬಂದವರಿಗೆ ಕಮ್ಕಿ ಇತ್ಯಾದಿ ಜಾಗ ನೋಂದಣಿ ಮಾಡಿಕೊಡುವ ಕುರಿತು ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ. ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸ್ವಾತಂತ್ರ್ಯ ಪೂರ್ವದಿಂದಲೂ ಕರಾವಳಿ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ಕುಮ್ಕಿ, ಕಾನೆಬಾನೆ ಜಮೀನು ಉಳುಮೆ ಮಾಡಿಕೊಂಡು ಬಂದಿದ್ದಾರೆ.
ಇವುಗಳ ಸಕ್ರಮಕ್ಕೆ ಹಿಂದಿನ ಸರ್ಕಾರ ಯಾವ ಪ್ರಯತ್ನ ಮಾಡಿಲ್ಲ. ಈ ಜಾಗದಲ್ಲಿ ಉಳುಮೆ ಮಾಡುತ್ತಿರುವವರ ಸ್ವಾಧೀನದಲ್ಲಿರುವ ಗೋಮಾಳ, ಸೊಪ್ಪಿನನಬೆಟ್ಟ, ಗಾಯರಾಣ, ಹುಲ್ಲಬನ್ನಿ ಜಾಗವನ್ನು ಯಾವ ರೀತಿ ಕಾನೂನಾತ್ಮಕವಾಗಿ ಅವರಿಗೆ ದಾಖಲೆ ಮಾಡಿಕೊಟ್ಟು ನ್ಯಾಯ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸಿಎಂ ಮತ್ತು ನಾನು ಇಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಿ ಸಮಿತಿ ರಚಿಸಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕಂಟ್ರೋಲ್ ರೂಂಗೆ ಕಾಲ್ ಮಾಡಿದ್ರೆ ಸಾಕು ಮಾಸಾಶನ ಸಿಗುತ್ತೆ: ವಿವಿಧ ರೀತಿಯ ಮಾಸಾಶನ ಪಡೆಯಲು ಪೇಪರ್ ಲೆಸ್ ವ್ಯವಸ್ಥೆ ಜಾರಿಗೆ ತಂದು ನೇರ ಖಾತೆಗೆ ಹಣ ಜಮೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಕೇವಲ ಆಧಾರ್ ಕಾರ್ಡ್ ಪಡೆದು ಅರ್ಹರಿಗೆ ಮಾಸಾಶನ ನೀಡಲಾಗುತ್ತದೆ. ಮಾಹಿತಿ ಇಲ್ಲದವರು ಕೇವಲ ನಿಯಂತ್ರಣ ಕೊಠಡಿಗೆ ಕರೆ ಮಾಡಿದರೆ ನಮ್ಮ ಅಧಿಕಾರಿಗಳೇ ಹೋಗಿ ಸೌಲಭ್ಯ ಕಲ್ಪಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ತಿಳಿಸಿದ್ದಾರೆ.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಧವೆ, ಅಂಗವಿಕಲ, ವಿಚ್ಚೇದನ ಮಹಿಳೆ, ಆಸಿಡ್ ದಾಳಿಗೊಳಗಾದವರು ಸೇರಿದಂತೆ ಹಲವು ರೀತಿಯಲ್ಲಿ ಪಿಂಚಣಿ ಕುರಿತು ಹಲವು ಯೋಜನೆಗಳಿವೆ. ಇದರಲ್ಲಿ 75.60 ಲಕ್ಷ ಫಲಾನುಭವಿ ಇದ್ದಾರೆ. ಒಟ್ಟು 9483.51 ಕೋಟಿ ಹಣ ಈ ಬಾರಿ ಬಜೆಟ್ನಲ್ಲಿ ಇಡಲಾಗಿದೆ. ತಿಂಗಳಿಗೆ 780 ಕೋಟಿ ಹಣವನ್ನು ಪಿಂಚಣಿ ರೂಪದಲ್ಲಿ ಇವರಿಗೆಲ್ಲಾ ಕೊಡಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ನಿಯಂತ್ರಣ ಕೊಠಡಿ: ಮಾಸಾಶನ ಸೌಲಭ್ಯ ಪಡೆಯಲು ಬೆಂಗಳೂರಿನಲ್ಲಿ ನಿಯಂತ್ರಣ ಕೊಠಡಿ ಮಾಡಲಾಗಿದೆ. ಪಿಂಚಣಿ ಬೇಡಿಕೆ ಸಲ್ಲಿಸಿದರೆ ಅವರ ಮನೆಗೆ ನಮ್ಮ ಅಧಿಕಾರಿಗಳೇ ಹೋಗಲಿದ್ದಾರೆ. ಕೇವಲ ಆಧಾರ್ ಕಾರ್ಡ್ ಮಾತ್ರ ಪಡೆದು ಫೋಟೋ ತೆಗೆದು ಅಪ್ಲೋಡ್ ಮಾಡಿ 72 ಗಂಟೆಯಲ್ಲೇ ಅವರಿಗೆ ಪಿಂಚಣಿ ಕಲ್ಪಿಸಲಾಗುತ್ತದೆ. ಬೇರೆ ಎಲ್ಲ ದಾಖಲೆ ಕೇಳಲ್ಲ ಎಂದು ಹೇಳಿದರು.
ಈವರೆಗೂ ನಮ್ಮ ಕಂಟ್ರೋಲ್ ರೂಂಗೆ 38. 5 ಸಾವಿರ ಕಾಲ್ ಬಂದಿವೆ. ಅದರಲ್ಲಿ 30330 ಅರ್ಹರಿದ್ದು, ಅವರಿಗೆಲ್ಲಾ 72 ಗಂಟೆಯಲ್ಲೇ ಸೌಲಭ್ಯ ಕೊಡಲಾಗಿದೆ. ಇಲ್ಲಿ ಯಾವ ಮಧ್ಯವರ್ತಿ ಕಾಟ ಇರಲ್ಲ. ನೇರ ಖಾತೆಗೆ ಹಣ ಹೋಗಲಿದೆ. ಹಿಂದೆ ವ್ಯಕ್ತಿ ಸತ್ತರೂ ಪಿಂಚಣಿ ಅವರ ಖಾತೆಗೆ ವರ್ಷಾನುಗಟ್ಟಲೆ ಹೋಗುತ್ತಿತ್ತು. 450 ಕೋಟಿ ಹಣ ಈ ರೀತಿ ಹೋಗುತ್ತಿದ್ದನ್ನು ತಪ್ಪಿಸಿದ್ದೇವೆ ಎಂದರು. ಅರ್ಜಿ ಸಲ್ಲಿಕೆ ಈಗ ಪೇಪರ್ ಲೆಸ್ ಆಗಿದೆ. ನೇರ ಖಾತೆಗೆ ಹಣ ಹೋಗಲಿದೆ ಎಂದು ಹೇಳಿದರು.
ಬಿಪಿಎಲ್ ಕುಟುಂಬಕ್ಕೆ 1.5 ಲಕ್ಷ ಪರಿಹಾರ: ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ಸದಸ್ಯರಿಗೆ ರಾಜ್ಯ ಸರ್ಕಾರದ 1 ಲಕ್ಷ ಕೇಂದ್ರದ 50 ಸಾವಿರ ಸೇರಿ ಒಂದೂವರೆ ಲಕ್ಷ ಪರಿಹಾರ ನೀಡಲಾಗುತ್ತಿದ್ದು, ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಕೇಂದ್ರದ 50 ಸಾವಿರ ಹಣ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್ ಪರ ನಾಗರಾಜ್ ಯಾದವ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್ ವೇಳೆ ಸಾವನ್ನಪ್ಪಿದವರಿಗೆ 50 ಸಾವಿರ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಕೊಡಲಾಗುತ್ತಿದೆ. ಆದರೆ, ನಾವು ಯಡಿಯೂರಪ್ಪ ನಿರ್ಧಾರದಂತೆ ಇದಕ್ಕೆ 1 ಲಕ್ಷ ಸೇರಿಸಿ ಕೊಡುತ್ತಿದ್ದೇವೆ. ಆಧಾರ್ ಲಿಂಕ್ ಆಗದವರು, ಬಿಪಿಎಲ್ ಪಟ್ಟಿಯಿಂದ ತಿರಸ್ಕಾರವಾಗಿರುವವರಿಗೆ ಪರಿಹಾರ ಸಿಕ್ಕಿಲ್ಲ. ಕೇಂದ್ರದ 50 ಸಾವಿರ ನಮ್ಮ ಸರ್ಕಾರದ 1 ಲಕ್ಷ ಸೇರಿ 1.5 ಲಕ್ಷ ಪರಿಹಾರ ನೀಡುತ್ತಿದ್ದು, ಬಿಪಿಎಲ್ ಇಲ್ಲದೇ ಇದ್ದರೆ 50 ಸಾವಿರ ಕೊಡಲಾಗುತ್ತದೆ ಎಂದು ಹೇಳಿದರು.
ಓದಿ: ಪ್ರಶ್ನೆಗೆ ಉತ್ತರಿಸಲು ಕಾಲಾವಕಾಶ ಕೋರಿದ ಸರ್ಕಾರ, ಕಾಂಗ್ರೆಸ್ ಆಕ್ಷೇಪ: ಕಲಾಪ ಮುಂದೂಡಿಕೆ