ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರಬಹುದಿತ್ತು. ಆದರೆ ಕೆಲವರು ಬೆನ್ನಿಗೆ ಚೂರಿ ಹಾಕಿದರು ಎಂದು ಮಾಜಿ ಸಚಿವ ಹೆಚ್ .ಡಿ.ರೇವಣ್ಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮುಂಬರುವ ಗ್ರಾಪಂ ಚುನಾವಣೆ, ಪಕ್ಷದ ಬಲವರ್ಧನೆ ಕುರಿತ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ 14 ತಿಂಗಳು ಕೊಡಬಾರದ ಕಿರುಕುಳ ಕೊಟ್ಟರು. ಕುತಂತ್ರ ಮಾಡಿ ಅಧಿಕಾರದಿಂದ ಕೆಳಗಿಳಿಸಿದರು. ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕುಮಾರಸ್ವಾಮಿ ಅವರು ಕ್ಷೇತ್ರದ ಕೆಲಸದ ಕಾರಣಕ್ಕಾಗಿ ಭೇಟಿ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್-ಬಿಜೆಪಿ ಅಡ್ಜೆಸ್ಟ್ಮೆಂಟ್ ಮಾಡಿಕೊಂಡಿವೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಗೆ ನಮ್ಮ ಪಕ್ಷ ಮುಗಿಸುವುದೇ ಗುರಿಯಾಗಿದೆ ಎಂದು ಕಿಡಿಕಾರಿದರು.
ಬಿಜೆಪಿಗೆ ಕಳೆದ ಚುನಾವಣೆಯಲ್ಲಿ 105 ಸ್ಥಾನಗಳನ್ನೂ ನಾಡಿನ ಜನರು ಕೊಟ್ಟಿಲ್ಲ. ಇದು ಕಾಂಗ್ರೆಸ್ ಕೊಟ್ಟ ಕೊಡುಗೆಯಾಗಿದೆ. ಕೋಮುವಾದಿಗಳ ವಿರುದ್ಧ ಎಲ್ಲರೂ ಒಗ್ಗೂಡಬೇಕು ಎಂದಿದ್ದಾರೆ. ಆದರೆ, ನಮ್ಮ ಬಿಜೆಪಿ ಬಿ ಟೀಂ ಎಂದು ಟೀಕೆ ಮಾಡುತ್ತಾರೆ. ಅದೇ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ಹಲವು ಸ್ಥಾನಗಳನ್ನು ನಾವು ಕಳೆದುಕೊಳ್ಳಬೇಕಾಯಿತು. ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾದಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಸೋಲಿಸಿದವು ಎಂದು ಹೇಳಿದರು.
ಮುಂಬರುವ ವಿಧಾನಸಭೆ ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ. ಆದರೆ ನಾವು ಈಗಿನಿಂದಲೇ ಚುನಾವಣೆಗೆ ಸಜ್ಜಾಗಬೇಕು. ಮುಂದಿನ ವಿಧಾನಸಭೆ ಚುನಾವಣೆ 2020 ಅಥವಾ 2023ಕ್ಕೆ ಬರುತ್ತದೆಯೋ ಗೊತ್ತಿಲ್ಲ. ಆದರೆ ನಾವು ಈಗಿನಿಂದಲೇ ಚುನಾವಣಾ ತಯಾರಿ ಮಾಡಬೇಕಿದೆ ಎಂದರು.
ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಮಾತನಾಡಿ, ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ಅನ್ನು ಮುಗಿಸಲು ಪ್ಲಾನ್ ಮಾಡಿವೆ ಎಂದು ಆರೋಪಿಸಿ, ಸಮರೋಪಾದಿಯಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದು ಹೇಳಿದರು.
ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಉಳಿಸಲು ಯುದ್ಧ ಮಾಡಬೇಕಿದೆ. ನಾಲ್ಕು ದಿಕ್ಕಿನಲ್ಲಿ ಪಕ್ಷ ಸಂಘಟನೆಗಾಗಿ ಹೋರಾಟ ಮಾಡಬೇಕಿದೆ. ಕುಟುಂಬ ರಾಜಕಾರಣ ಎಲ್ಲಾ ಪಕ್ಷದಲ್ಲಿ ಇದೆ ಎಂದರು.
ಒಂದು ದಿಕ್ಕಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇನ್ನೊಂದು ದಿಕ್ಕಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೀಗೆ ಒಂದೊಂದು ದಿಕ್ಕಿನಲ್ಲಿ ಪ್ರವಾಸ ಮಾಡಿ ಪಕ್ಷ ಬಲಪಡಿಸಬೇಕು. ಆಗ ಮಾತ್ರ ಮುಂದಿನ ಚುನಾವಣೆಯಲ್ಲಿ ಕುಮಾರಣ್ಣ ಮುಖ್ಯಮಂತ್ರಿಯಾಗಲು ಸಾಧ್ಯ ಎಂದು ಹೇಳಿದರು.
ಆಂತರಿಕ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಪಕ್ಷ ಸಂಘಟನೆ ಮಾಡಬೇಕು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಪಕ್ಷದ 2 ಕಣ್ಣುಗಳಿದ್ದ ಹಾಗೆ. ಇಬ್ಬರೂ ಒಟ್ಟಾಗಿ ಯುದ್ಧಕ್ಕೆ ಹೋದರೆ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸಭಾಪತಿ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಲಿ ಎಂದರು. ಆರಬಾವಿ ಕ್ಷೇತ್ರದ ಭೀಮಪ್ಪ ಗುಂಡಪ್ಪ ಗಡದ್, ಮಂಗಳ ಬಿರಾದಾರ್ ಮತ್ತಿತರ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಯುವಕರಿಗೆ 15ರಿಂದ 20 ವಿಧಾನಸಭಾ ಕ್ಷೇತ್ರಗಳನ್ನು ಮೀಸಲಿಡಬೇಕು: ಸಂಸದ ಪ್ರಜ್ವಲ್ ರೇವಣ್ಣ
ಸಭೆಯಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಬಹಳಷ್ಟು ಯುವಕರು ಜೆಡಿಎಸ್ ಸೇರಲು ಸಿದ್ಧರಿದ್ದಾರೆ. ನಾನು ಮತ್ತು ನಿಖಿಲ್ ಶಿರಾ ಉಪಚುನಾವಣೆಯಲ್ಲಿ ಕೈ ಜೋಡಿಸಿ ಕೆಲಸ ಮಾಡಿದ್ದರೂ ಗೊಂದಲ ಸೃಷ್ಟಿ ಮಾಡಲಾಯಿತು. ನಾವು ಕೂಡ ಕೆಲವು ಸಿದ್ಧಾಂತಗಳನ್ನು ಬದಲಿಸಿಕೊಳ್ಳಬೇಕಿದೆ. ನಾವು ಸುಮ್ಮನೆ ಕೂರುವುದಿಲ್ಲ. ಪಕ್ಷ ಸಂಘಟನೆಗೆ ನೀಡುವ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಶಕ್ತಿ ಪಕ್ಷಕ್ಕಿದೆ. ಬೇರೆ ಪಕ್ಷದ ಬಗ್ಗೆ ಮಾತನಾಡುವುದಿಲ್ಲ ಎಂದರು.
ಇನ್ನು ಮುಂದೆ ಬಹಳ ಚುನಾವಣೆಗಳು ಇವೆ. ಗ್ರಾಮ ಪಂಚಾಯತಿಯಲ್ಲಿ ನಮ್ಮ ಪಕ್ಷದ ಚಿಹ್ನ ಮೇಲೆ ಚುನಾವಣೆ ನಡೆಯಲ್ಲ. ಆದರೆ ಮುಂದಿನ ಚುನಾವಣೆಗೆ ಈ ಚುನಾವಣೆ ದಿಕ್ಸೂಚಿ ಆಗಬೇಕು. ನಾವು ಗ್ರಾಮ ಪಂಚಾಯತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವಾಗ ನಿಷ್ಠೆ ಇದೆಯಾ ಅಂತಾ ನೋಡಬೇಕು. ಬಿಜೆಪಿಯವರು ಗೆದ್ದ ಅಭ್ಯರ್ಥಿಗಳನ್ನು ಹಾರಿಸಿಕೊಂಡು ಹೋಗುವುದನ್ನು ನೋಡ್ತಾರೆ. ನಮ್ಮ ಹಾಗೆ ಗದ್ದೆಗೆ ಇಳಿದು ಮತ ಕೇಳಲ್ಲ ಎಂದು ವಾಗ್ದಾಳಿ ನಡೆಸಿದರು.
ನಿಖಿಲ್ ಮಾತುಗಳನ್ನು ಗಮನಿಸಿದ್ದೇನೆ. ಬಹಳ ಆಸೆ, ಸ್ಪಷ್ಟ ಗುರಿ ಇದೆ. ನಾವೂ ಕೂಡ ಕೆಲವು ಸಿದ್ಧಾಂತಗಳನ್ನು ಬದಲಿಸಿಕೊಳ್ಳಬೇಕಿದೆ. ಹಲವಾರು ಯುವಕರು ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ. ಕೆಲವರು ಕೆಲವೊಂದು ಅಪೇಕ್ಷೆಗಳನ್ನು ಇಟ್ಟುಕೊಂಡೇ ಪಕ್ಷಕ್ಕೆ ಬರುತ್ತಾರೆ ಎಂದರು.
ಗೊಂದಲಕ್ಕೆ ತೆರೆ ಎಳೆದ ನಿಖಿಲ್: ಇದೇ ವೇದಿಕೆಯಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಅಕ್ಕಪಕ್ಕ ಕುಳಿತು ಕಾರ್ಯಕರ್ತರ ಗಮನ ಸೆಳೆದರು.
ಬಾ ಗುರು ಇಲ್ಲಿ, ಬಾ ಬ್ರದರ್ ಅಂತ ಪ್ರಜ್ವಲ್ರನ್ನ ಬಳಿ ಕರೆದ ನಿಖಿಲ್, ಶಿರಾದಲ್ಲಿ ಹೆಸರು ಹೇಳಿಲ್ಲ ಅಂತ ಗೊಂದಲ ಸೃಷ್ಟಿಯಾಗಿತ್ತು. ಅದಕ್ಕೆ ಇಲ್ಲಿ ತೆರೆ ಎಳೆದು ಬಿಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಒಗ್ಗಟ್ಟು ಪ್ರದರ್ಶಿಸಿದರು.