ಬೆಂಗಳೂರು : ರೇವಣ್ಣ ಕುಮಾರ್ ಆತ್ಮಹತ್ಯೆ ಪ್ರಯತ್ನಕ್ಕೂ ಮುನ್ನ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿಯವರಿಗೆ ಪತ್ರ ಕಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ ಖಾಯಂ ಆಗ್ತಿಲ್ಲ. ಅದಕ್ಕಾಗಿ ಸಾಯುತ್ತೇನೆ ಎಂದು ಪತ್ರದಲ್ಲಿ ರೇವಣ್ಣ ಕುಮಾರ್ ಬರೆದಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಶ್ರೀನಿವಾಸ ಪೂಜಾರಿ, ರೇವಣ್ಣ ಕುಮಾರ್ ಬರೆದ ಪತ್ರವನ್ನು ಬಹಿರಂಗ ಪಡಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರವೇ ಹಂಗಾಮಿ ನೌಕರರಿಗೆ 13,200 ಕನಿಷ್ಟ ವೇತನ ಕೊಡಬೇಕು ಅಂತ ರಾಜ್ಯಪತ್ರದಲ್ಲಿ ಪ್ರಕಟಿಸಿ, ಮೂರು ವರ್ಷದ ಹಿಂದೆ ಪ್ರಕಟಣೆ ಹೊರಡಿಸಿದೆ. ಆದರೆ ಸರ್ಕಾರ ಇಷ್ಟು ವೇತನ ಕೊಡುತ್ತಿಲ್ಲ. ಇದು ಸರ್ಕಾರಕ್ಕೆ ಶೋಭೆ ತರುತ್ತಾ?. ಇದೇನಾ ಬಡವರಿಗೆ ಸರ್ಕಾರ ಕೊಡುವ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.
ಕೂಡಲೇ ಪ್ರಕರಣದ ಗಂಭೀರತೆ ಪರಿಗಣಿಸಿ ಗ್ರಂಥಾಲಯದ ಹಂಗಾಮಿ ನೌಕರರಿಗೆ ಕನಿಷ್ಠ ವೇತನ ಕೊಡಬೇಕು. 24 ಗಂಟೆಯೊಳಗೆ 6,000 ಕುಟುಂಬಗಳಿಗೆ ಕನಿಷ್ಟ ವೇತನ ಕೊಡಬೇಕು. ರೇವಣ್ಣ ಕುಮಾರ್ ಆಸ್ಪತ್ರೆ ಖರ್ಚು ಸರ್ಕಾರದಿಂದ ಭರಿಸಲಿ ಎಂದು ಒತ್ತಾಯಿಸಿದರು.
ಪತ್ರದಲ್ಲೇನಿದೆ..?
ರೇವಣ್ಣ ಕುಮಾರ್ ತಮ್ಮ ಪತ್ರದಲ್ಲಿ ಅಂತ್ಯ ಸಂಸ್ಕಾರ ಸಿಎಂ ಅವರಿಂದಲೇ ಆಗಬೇಕು. ಇದು ನನ್ನ ಕೊನೆಯಾಸೆ ಎಂದು ಬರೆದಿದ್ದಾರೆ. ಸಾವಿನ ನಂತರ ಮನೆಯಲ್ಲಿ ಫೊಟೋ ಹಾಕಬಾರದು, ಅಳಬಾರದು. ವಿಧಿ, ವಿಧಾನ ಬೇಡ. ನಮ್ಮೂರ ಕೆರೆಯಲ್ಲಿ ಸೀಮೆಎಣ್ಣೆ, ಕಟ್ಟಿಗೆ, ಬೆಂಕಿ ಪೊಟ್ಟಣ ಸಾಕು. ಹೂವು ಹಣ್ಣು ಬೇಡ. 600 ಸಾವಿರ ಕುಟುಂಬಗಳ ರಕ್ಷಣೆಗೆ ಸರ್ಕಾರ ಮುಂದಾಗುತ್ತಿಲ್ಲ. ನನ್ನ ಸಾವಿಗೆ ಸರ್ಕಾರವೇ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.