ಬೆಂಗಳೂರು: ವಿಧಾನಸಭೆಯ ಜಂಟಿ ಅಧಿವೇಶನ ಕಲಾಪದ ಚಿತ್ರೀಕರಣಕ್ಕೆ ನಿಷೇಧ ಹೇರಲಾಗಿದ್ದು, ಕ್ಯಾಮೆರಾಗಳಿಗೆ ಅವಕಾಶವಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗಳಿಗೆ ಅಧಿಕೃತವಾಗಿ ಸೂಚನೆ ನೀಡಿದ್ದಾರೆ.
ಈ ಹಿಂದೆ ಸಹ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪದ ಚಿತ್ರೀಕರಣಕ್ಕೆ ನಿಷೇಧ ಹೇರಿದ್ದರು. ಆದರೆ, ದೃಶ್ಯ ಮಾಧ್ಯಮಗಳು ಬೇಸರ ವ್ಯಕ್ತಪಡಿಸಿದ್ದರಿಂದ ಇದು ತಾತ್ಕಾಲಿಕ ಎಂದು ಸ್ಪೀಕರ್ ಹೇಳಿದ್ದರು. ಆದರೆ, ಇದೀಗ ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಮಾಧ್ಯಮವನ್ನು ಕಲಾಪದಿಂದ ಹೊರಗಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಲೋಕಸಭೆ, ರಾಜ್ಯಸಭೆಯಂತೆ ಕರ್ನಾಟಕ ವಿಧಾನಸಭೆ ನಡೆಯಲಿದೆ. ಅಲ್ಲಿನ ವ್ಯವಸ್ಥೆ ಇಲ್ಲಿಯೂ ತರಲಿದ್ದೇವೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಮತ್ತು ರಾಜ್ಯಸಭಾ ಮಾದರಿ ಅನುಸರಿಸಲು ನಿರ್ಧರಿಸಲಾಗಿದೆ. ನಮ್ಮ ನಿಲುವುಗಳಿಗೆ ನಾವು ಬದ್ಧವಾಗಿದ್ದೇವೆ. ದೃಶ್ಯ ಮಾಧ್ಯಮ ಕ್ಯಾಮೆರಾಗಳಿಗೆ ವಿಧಾನಸಭೆಯ ಸಭಾಂಗಣದ ಒಳಗೆ ಪ್ರವೇಶವಿಲ್ಲ. ಹಾಗಾಗಿ ಕಲಾಪದ ನೇರ ಪ್ರಸಾರಕ್ಕೆ ಅವಕಾಶ ಇರುವುದಿಲ್ಲ. ಕ್ಯಾಮೆರಾಮೆನ್ಗಳಿಗೆ ವಿಧಾನಸಭೆಯ ಪಾಸ್ ನೀಡದಂತೆ ಸ್ಪೀಕರ್ ಆದೇಶ ನೀಡಿದ್ದಾರೆ ಎನ್ನಲಾಗಿದೆ.