ಬೆಂಗಳೂರು: ಬಹು ದಿನಗಳಿಂದ ನಡೆಯುತ್ತಿರುವ ಟೊಯೊಟಾ ಕಾರ್ಮಿಕರ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಲಹೆ ನೀಡಿದ್ದಾರೆ.
ನಗರದ ಖನಿಜ ಭವನದಲ್ಲಿ ಇಂದು ಆಯೋಜಿಸಿದ್ದ ಸಭೆಯಲ್ಲಿ ಟೊಯೊಟಾ ಕಂಪನಿಯ ಅಧಿಕಾರಿಗಳು, ಕಾರ್ಮಿಕ ಮುಖಂಡರುಗಳೊಂದಿಗೆ ವಿಸ್ತ್ರತ ಚರ್ಚೆ ನಡೆಯಿತು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಸಂಸದ ಡಿ.ಕೆ. ಸುರೇಶ್, ಮಾಗಡಿ ಶಾಸಕ ಎ. ಮಂಜು, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
ಕಾರ್ಮಿಕ ಸಂಘಟನೆಯ ಮುಖಂಡರು ಹಾಗೂ ಟೊಯೊಟಾ ಅಧಿಕಾರಿಗಳ ಸಮಸ್ಯೆಗಳನ್ನು ಆಲಿಸಲಾಯಿತು. ತನಿಖೆಯ ಉದ್ದೇಶದಿಂದ ಸಸ್ಪೆಂಡ್ ಮಾಡಿರುವ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಸಮಯದ ಕಾಲಮಿತಿಯಲ್ಲಿ ತನಿಖೆ ಮುಗಿಸುವ ಭರವಸೆಯನ್ನು ನೀಡಬೇಕು ಎಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು.
ಈ ವೇಳೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಕಾರ್ಮಿಕರು ಹಾಗೂ ಕಂಪನಿಯ ಆಡಳಿತ ಮಂಡಳಿಯ ನಡುವೆ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಸೂಕ್ತ. ಕರ್ನಾಟಕ ಕೈಗಾರಿಕಾ ಸ್ನೇಹಿ ರಾಜ್ಯವಾಗಿದ್ದು, ರಾಜ್ಯದಲ್ಲಿ ಕೈಗಾರಿಕೆಗಳಿಗೆ ಇರುವ ವಾತಾವರಣದ ಬಗ್ಗೆ ಸಕಾರಾತ್ಮಕ ಸಂದೇಶ ನೀಡುವುದು ಹಾಗೂ ಅದರ ಜೊತೆಗೆ ಕಾರ್ಮಿಕರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಶೀಘ್ರವೇ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಓದಿ: ಮುಖ್ಯಮಂತ್ರಿಗಳೇ ಸಭೆ ಕರೆದು ಟೊಯೊಟಾ ಕಾರ್ಮಿಕರ ಸಮಸ್ಯೆ ಬಗೆಹರಿಸಲಿ : ಸಿದ್ದರಾಮಯ್ಯ
ಯಾವುದೇ ಸಮಸ್ಯೆಯನ್ನು ಹೆಚ್ಚು ದಿನಗಳ ಕಾಲ ಮುಂದುವರೆಸಿದಲ್ಲಿ ಸಮಸ್ಯೆಗಳು ಬಗೆಹರಿಯುವುದು ಸುಲಭವಾಗಿರುವುದಿಲ್ಲ. ಪ್ರಾಥಮಿಕ ಹಂತದಲ್ಲಿಯೇ ಇದನ್ನು ಬಗೆಹರಿಸಿಕೊಂಡಲ್ಲಿ ಈ ಮಟ್ಟದಲ್ಲಿ ದೊಡ್ಡದಾಗುತ್ತಿರಲಿಲ್ಲ. ಕಾಲಮಿತಿಯೊಳಗೆ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಕಂಪನಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.