ಬೆಂಗಳೂರು: ಹೆಣ್ಣು ಮಕ್ಕಳ ಸಬಲೀಕರಣದ ಉದ್ದೇಶದಿಂದ ಮೆಟ್ರಿಕ್ ನಂತರದ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ.
ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ನಡೆದ ಇಲಾಖೆ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಯೋಜನೆ ಅನುಷ್ಠಾನಕ್ಕೂ ಮೊದಲು ಪ್ರತಿ ಜಿಲ್ಲೆಯ 10 ವಸತಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲು ನಿರ್ಧರಿಸಲಾಗಿದೆ.
ನಂತರದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲ ಶಾಲೆಗಳ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರಕ್ಕೆ ಮೂರು ದಿನ ಕರಾಟೆ ತರಗತಿ ನಡೆಸಲಾಗುವುದು. ಕರಾಟೆ ಶಿಕ್ಷಕಿಯರಿಂದಲೇ ತರಬೇತಿ ನೀಡಲಾಗುತ್ತದೆ. ಇನ್ನು 15 ದಿನಗಳಲ್ಲಿ ಕರಾಟೆ ತರಬೇತಿ ಅಧಿಕೃತವಾಗಿ ಆರಂಭಿಸಲಾಗುವುದು ಎಂದು ತಿಳಿದು ಬಂದಿದೆ.
ಅಸ್ಪೃಶ್ಯತೆ ನಿವಾರಣೆಗೆ ಜನಜಾಗೃತಿ ಅಭಿಯಾನ:
ಅಸ್ಪೃಶ್ಯತೆ ನಿವಾರಣೆ ನಿಟ್ಟಿನಲ್ಲಿ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ನಡೆಸಲು ಸಮಾಜ ಕಲ್ಯಾಣ ಇಲಾಖೆ ಚಿಂತನೆ ನಡೆಸಿದೆ. ಜೊತೆಗೆ ವಿದ್ಯಾರ್ಥಿ ವೇತನ ಬಾಕಿ ಸಂಬಂಧ ಅ.27ರ ನಂತರ ನೋಡಲ್ ಅಧಿಕಾರಿ ನೇಮಕ ಮಾಡಲಾಗುವುದು. 15 ದಿನಗಳ ಕಾಲ ಈ ಸಂಬಂಧ ಅಭಿಯಾನ ರೀತಿಯಲ್ಲಿ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ.
ಅಂತರ್ಜಾತಿಯ ವಿವಾಹಕ್ಕೂ ನೀಡಲಾಗುವ ಪ್ರೋತ್ಸಾಹ ಧನ 159 ಕೋಟಿ ರೂ. ಬಾಕಿ ಇದೆ. ವಿದ್ಯಾರ್ಥಿ ವೇತನ ಸುಮಾರು 200 ಕೋಟಿ ಬಾಕಿ ಇದ್ದು, ಒಂದು ಅಭಿಯಾನ ರೀತಿಯಲ್ಲಿ ಕಾರ್ಯಕ್ರಮ ಮಾಡಿ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಗಗನಕ್ಕೇರಿದ ದಿನಸಿ ಸಾಮಗ್ರಿ, ತರಕಾರಿ ಬೆಲೆ: ಪೆಟ್ರೋಲ್- ಡಿಸೇಲ್ ದರ ಏರಿಕೆಯೇ ಕಾರಣ