ಬೆಂಗಳೂರು : ಬಿಬಿಎಂಪಿ ಖಾತೆ ಪ್ರಮಾಣಪತ್ರ ಮತ್ತು ಕಂದಾಯ ಇಲಾಖೆಯ ರಸೀದಿಗಳನ್ನು ನಕಲು ಮಾಡಿ ನಿವೇಶನವೊಂದನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಒಂದೇ ಕುಟುಂಬದ ಐವರಿಗೆ ಹೈಕೋರ್ಟ್, ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.
ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಜಯನಗರದ ನಿವಾಸಿಗಳಾದ ರೆಹಮತ್ ಉಲ್ಲಾ ಷರೀಫ್ ಹಾಗೂ ಕುಟುಂಬದ ಇತರೆ ನಾಲ್ವರು ಸದಸ್ಯರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾ. ಹೆಚ್.ಪಿ.ಸಂದೇಶ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿ ತಿರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ
ನಗರದ ನೀಲಸಂದ್ರದಲ್ಲಿರುವ 55.5*37.5 ಅಡಿ ವಿಸ್ತೀರ್ಣದ ನಿವೇಶನಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ತಂದೆ ಅತಾವುಲ್ಲಾ ಷರೀಫ್ 1986ರಲ್ಲಿ ಸಿವಿಲ್ ದಾವೆ ಹೂಡಿದ್ದರು. ಆ ದಾವೆ ಅಪಕ್ವವಾಗಿದೆ ಎಂದು ಸಿವಿಲ್ ಕೋರ್ಟ್ ಆದೇಶಿಸಿತ್ತು. ಷರೀಫ್ ನಿಧನದ ನಂತರ ರೆಹಮತ್ ಉಲ್ಲಾ ಸಿವಿಲ್ ಕೋರ್ಟ್‌ಗೆ ಪ್ರತ್ಯೇಕ ದಾವೆ ಹೂಡಿದ್ದರು. ಅದನ್ನು ಸಿವಿಲ್ ಕೋರ್ಟ್ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿದ ಮೇಲ್ಮನವಿಯನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಸಹ ವಜಾಗೊಳಿಸಿತ್ತು.
ಓದಿ: ಲಿವ್ - ಇನ್ - ರಿಲೇಷನ್ ಶಿಪ್ ಬಳಿಕ ಅತ್ಯಾಚಾರ ಆರೋಪ: ಯುವಕನಿಗೆ ನಿರೀಕ್ಷಣಾ ಜಾಮೀನು
ತದನಂತರ ಈ ನಿವೇಶನಕ್ಕೆ ಸಂಬಂಧಿಸಿದ ಬಿಬಿಎಂಪಿ ಖಾತೆ, ಕಂದಾಯ ಇಲಾಖೆಯ ಕಂದಾಯ ರಸೀದಿ ಮತ್ತು ಆದಾಯ ತೆರಿಗೆ ಪಾವತಿ ರಸೀದಿಗಳನ್ನು ನಕಲು ಮಾಡಿದ ಅರ್ಜಿದಾರರು, ಜಾಗವನ್ನು ಸಯ್ಯದ್ ಅಮಾನುಲ್ಲಾ ಮತ್ತು ಸಯ್ಯದ್ ಅತೀಕ್ ಉಲ್ಲಾ ಹೆಸರಿಗೆ 2014ರ ಜ.13ರಂದು ಜಯನಗರ ಉಪ ನೋಂದಣಾಧಿಕಾರಿಯ ಕಚೇರಿಯಲ್ಲಿ ಮಾರಾಟ ಕ್ರಮ ಮಾಡಿದ್ದಾರೆ ಎಂದು ಆರೋಪಿಸಿ ಗುಲ್ನಾಜ್ ಬೇಗಂ ಎಂಬುವರು ಜಯನಗರ ಪೊಲೀಸ್ ಠಾಣೆಯಲ್ಲಿ 2019ರ ಆ.1ರಂದು ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಬಂಧನ ಭೀತಿಗೆ ಒಳಗಾಗಿದ್ದ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಿವಿಲ್ ದಾವೆ ವಿಚಾರವಾಗಿ ನಗರದ ಅಧೀನ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿದಾರರಿಗೆ ಹಿನ್ನಡೆಯಾಗಿದೆ. ಆದರೂ ವಂಚನೆ ಮಾಡುವ ಉದ್ದೇಶದಿಂದಲೇ ದಾಖಲೆಗಳನ್ನು ನಕಲು ಮಾಡಿ, ಜಾಗ ಮಾರಾಟ ಮಾಡಿದ್ದಾರೆ. ಪ್ರಕರಣ ಗಂಭೀರ ಸ್ವರೂಪದಿಂದ ಕೂಡಿರುವ ಕಾರಣ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.