ಬೆಂಗಳೂರು: ರಾಜ್ಯದಲ್ಲಿರುವ ಲಿಂಗಾಯತ ಸಮುದಾಯದವರಿಗೆ ಶೇ 16 ರಷ್ಟು ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ವಿಧಾನಪರಿಷತ್ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯ ಮಾಡಿದ್ದಾರೆ.
ಲಿಂಗಾಯತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಶೇ16 ರಷ್ಟು ಮೀಸಲಾತಿ ನೀಡುವಂತೆ ಪತ್ರದ ಮೂಲಕ ಒತ್ತಾಯಿಸಿರುವ ಅವರು, ಕರ್ನಾಟಕದಲ್ಲಿರುವ ಹಿಂದೂ ಮರಾಠಾ ಸಮಾಜಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಸಮುದಾಯದ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದಕ್ಕೆ ಅಭಿನಂದನೆಗಳು. ಕರ್ನಾಟಕದಲ್ಲಿ ಅನೇಕ ದಿನಗಳಿಂದ ಲಿಂಗಾಯತರಿಗೆ ಶೇ16 ರಷ್ಟು ಮೀಸಲಾತಿ ಕೊಡಬೇಕೆಂದು ಕರ್ನಾಟಕದ ಸಮಸ್ತ ಲಿಂಗಾಯತರು ನಿಮಗೆ ಹತ್ತು ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮರಾಠಾ ಸಮಾಜಕ್ಕೆ ಶೇ 16 ರಷ್ಟು ಮೀಸಲಾತಿಯನ್ನು ಆ ಸರ್ಕಾರ ನೀಡಿದೆ. ಆ ಸಮಾಜ ಎಲ್ಲ ಅನುಕೂಲತೆಗಳನ್ನು ಪಡೆಯುತ್ತಿದೆ. ಆದರೆ ಅಲ್ಲಿ ಮರಾಠಾ ಸಮುದಾಯ ಮಹಾರಾಷ್ಟ್ರದಲ್ಲಿ ಅಷ್ಟು ದೊಡ್ಡ ಸಂಖ್ಯೆಯಲ್ಲಿರುವುದು. ಅದರಂತೆ ಕರ್ನಾಟಕದಲ್ಲಿ ಲಿಂಗಾಯತರು ಅತಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇಡೀ ಕರ್ನಾಟಕದ ಸಮಸ್ತ ಲಿಂಗಾಯತರ ಹೋರಾಟ ವೇದಿಕೆ ತಮ್ಮನ್ನು ಭೇಟಿಯಾಗಿ ಮೀಸಲಾತಿ ಕಲ್ಪಿಸಬೇಕೆಂದು ಕೇಳಿಕೊಂಡರೂ ಇಲ್ಲಿಯವರೆಗೆ ಯಾವ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ವಿವರಿಸಿದ್ದಾರೆ.
ರಾಜ್ಯದಲ್ಲಿ ಶಾಸನ ಸಭೆಗಳಿಗೆ ಚುನಾವಣೆಗಳು ನಡೆದು, ತಾವು ಚುನಾವಣಾ ಪ್ರಚಾರದಲ್ಲಿ ಲಿಂಗಾಯತರ ಒಂದು ಮತವೂ ಬೇರೆ ಪಕ್ಷದ ಅಭ್ಯರ್ಥಿಗೆ ಹೋಗಬಾರದೆಂದು ಎಂದಿದ್ದೀರಿ. ಇಲ್ಲಿಯವರೆಗೆ ತಾವು ಲಿಂಗಾಯತರಿಗೆ ಮಾಡಿದ್ದೇನು. ತಾವು ಲಿಂಗಾಯತ ಸಮಾಜದಲ್ಲಿ ಹುಟ್ಟಿದ್ದರಿಂದ ನಿಮಗೆ ಮುಖ್ಯಮಂತ್ರಿ ಪದವಿ ಸಿಕ್ಕಿದೆ ಎಂಬುದನ್ನು ಸಹ ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. 'ಹಿತ್ತಲ ಗಿಡ ಮದ್ದಲ್ಲ' ಎಂದು ಹೇಳುವ ಗಾದೆ ಮಾತಿನಂತೆ ನೀವು ಲಿಂಗಾಯತರನ್ನು ನಿಷ್ಕಾಳಜಿ ಮಾಡುತ್ತೀರಿ ಎಂಬುದು ಅನೇಕರ ಅಹವಾಲು.
ನೀವು ಮುಖ್ಯಮಂತ್ರಿಗಳಾದ ನಂತರ ಬಹಳಷ್ಟು ಜನರು ಲಿಂಗಾಯತರಿಗೆ ಶೇ 16 ಮೀಸಲಾತಿ ದೊರೆಯುತ್ತದೆಂಬ ನಿರೀಕ್ಷೆಯಲ್ಲಿದ್ದರು. ಈಗ ಅವರೆಲ್ಲರಿಗೂ ನಿರಾಸೆಯಾಗಿದೆ. ಬೇರೆ ಬೇರೆ ಸಮುದಾಯದವರು ತಮಗೆ ಹೆಚ್ಚು ಹೆಚ್ಚು ಮೀಸಲಾತಿಯನ್ನು ಕೊಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟಗಳು ನ್ಯಾಯಯುತವಾಗಿರುವುದರಿಂದ ಅದಕ್ಕೆ ಅವರು ಒತ್ತಾಯ ಮಾಡುತ್ತಿದ್ದಾರೆ. ಜಾತ್ಯತೀತ ರಾಷ್ಟ್ರವಾದರೂ ಕರ್ನಾಟಕದಲ್ಲಿಯೂ ಎಲ್ಲವೂ ಜಾತಿಯ ಆಧಾರದಲ್ಲಿಯೇ ನಡೆಯುತ್ತಿದೆ.
ಲಿಂಗಾಯತರಲ್ಲಿಯೂ ಶೇ 100 ರಲ್ಲಿ 70 ರಷ್ಟು ಬಡವರು, ಕೂಲಿಕಾರರು ಇದ್ದಾರೆ. ಲಿಂಗಾಯತ ಸಮಾಜವು ಕೃಷಿಯ ಮೇಲೆ ಬದುಕಿರುವುದು. ಭೂಮಿ ತಾಯಿ ಒಡಲಲ್ಲೇ ಬದುಕಿನ ತುತ್ತಿನ ಚೀಲವನ್ನು ತುಂಬಿಕೊಳ್ಳುತ್ತಿದ್ದಾರೆ. ಪ್ರಕೃತಿಯ ವಿಕೋಪದಿಂದ ಇವರ ಜೀವನ ಹೆಚ್ಚು ಕಡಿಮೆಯಾಗಿದ್ದರಿಂದ ಸದಾ ಕಷ್ಟವನ್ನೇ ಅನುಭವಿಸುತ್ತಿರುವ ಈ ಸಮಾಜಕ್ಕೆ ಮೀಸಲಾತಿ ಕೊಡುವುದು ನ್ಯಾಯಯುತವಾದದ್ದು ಎಲ್ಲರೂ ಅಧಿಕಾರವಿದ್ದಾಗ ತಮ್ಮ ತಮ್ಮ ಸಮುದಾಯ, ಸಮಾಜದ ಬಗ್ಗೆ ಕಾಳಜಿಯನ್ನು ವಹಿಸುತ್ತಾರೆ.
ಅವರಂತೆ ನೀವೇಕೆ ಕಾಳಜಿ ವಹಿಸಬಾರದು? ಮೇಲಿನ ಎಲ್ಲ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ತಕ್ಷಣ ಶೇ 16 ರಷ್ಟು ಮೀಸಲಾತಿಯನ್ನು ಲಿಂಗಾಯತ ಸಮುದಾಯಕ್ಕೆ ಕಲ್ಪಿಸುತ್ತೀರೆಂದು ನಂಬಿದ್ದೇನೆ. ಮರಾಠಾ ಸಮಾಜಕ್ಕೆ ಕರ್ನಾಟಕದಲ್ಲಿ ಪ್ರಾಧಿಕಾರ ಮಾಡಿದ್ದರಿಂದ ಮಹಾರಾಷ್ಟ್ರದಲ್ಲಿ ಅಲ್ಪಸಂಖ್ಯಾತ ಲಿಂಗಾಯತರಿಗೆ ಸಹ ಅಲ್ಲಿಯ ಸರಕಾರ ಅವರಿಗೂ ಅಲ್ಲಿಯ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬಹುದು ಎಂದಿದ್ದಾರೆ.