ಬೆಂಗಳೂರು : ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನಡೆಯುವ ಡಿ ಗ್ರೂಪ್ ಹುದ್ದೆಗಳ ನೇಮಕಾತಿಯಲ್ಲಿ ಶೇ. 33ರಷ್ಟು ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಸಿಬ್ಬಂದಿಯಂತಹ ಗ್ರೂಪ್ ಡಿ ಹುದ್ದೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು. ಮಹಿಳೆಯರ ಸಬಲೀಕರಣ ಮತ್ತು ಅವರಿಗೆ ಸಾಮಾಜಿಕ ನ್ಯಾಯ, ಸಮಾನ ಉದ್ಯೋಗಾವಕಾಶ ಒದಗಿಸುವ ದೃಷ್ಟಿಯಿಂದ ಶೇ. 33ರಷ್ಟು ನೇರ ನೇಮಕಾತಿ ಹದ್ದೆಗಳಲ್ಲಿ ಅವರಿಗೆ ಆದ್ಯತೆ ನೀಡಬೇಕು. ಈ ಬಗ್ಗೆ ಹೊರಗುತ್ತಿಗೆ ಏಜೆನ್ಸಿಗಳೊಂದಿಗೆ ಮಾಡಿಕೊಳ್ಳುವ ಒಪ್ಪಂದದಲ್ಲಿ ಈ ಅಂಶವನ್ನು ಸೇರಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯ, ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರೆ ಸರ್ಕಾರಿ ವಲಯದ ಅಂಗ ಸಂಸ್ಥೆಗಳು ಕೂಡ ಪಾಲಿಸಬೇಕು. ಈ ಸಂಬಂಧ ಸರ್ಕಾರದ ಎಲ್ಲಾ ಆಡಳಿತ ಇಲಾಖೆಗಳ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಇಲಾಖೆ, ಸಂಸ್ಥೆಗಳಿಗೆ ಸೂಚನೆ ನೀಡಬೇಕು. ಯಾವುದೇ ತೊಂದರೆ ಉಂಟಾದಲ್ಲಿ ಇಲಾಖೆ ಕಾರ್ಯದರ್ಶಿಗಳೇ ಬಗೆಹರಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಯೋಗ ದಿನಾಚರಣೆ -2022: ಮೈಸೂರಿಗೆ ಪ್ರಧಾನಿ ಮೋದಿ