ಬೆಂಗಳೂರು : ಮೈಸೂರು, ಶಿವಮೊಗ್ಗ, ರಾಯಚೂರು ಸೇರಿದಂತೆ ರಾಜ್ಯದ ಪ್ರಮುಖ ವಿಮಾನ ನಿಲ್ದಾಣಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರಲು ವಸತಿ, ಮೂಲ ಸೌಕರ್ಯ ಸಚಿವ ವಿ.ಸೋಮಣ್ಣ ಅಕ್ಟೋಬರ್ 18 ರಂದು ದೆಹಲಿಗೆ ತೆರಳಲಿದ್ದಾರೆ.
18ರಂದು ದೆಹಲಿಯಲ್ಲಿ ನಡೆಯಲಿರುವ ನಾಗರಿಕ ವಿಮಾನ ಯಾನ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲಿರುವ ಸಚಿವ ವಿ.ಸೋಮಣ್ಣ ಅವರು ರಾಜ್ಯದ ಬೇಡಿಕೆಯನ್ನು ಕೇಂದ್ರದ ಮುಂದಿಡಲಿದ್ದಾರೆ. ರಾಜ್ಯಗಳಲ್ಲಿ ಮೂಲಸೌಕರ್ಯ ಖಾತೆಯನ್ನು ಹೊಂದಿರುವ ಸಚಿವರುಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ರಾಜ್ಯದ ಪ್ರಮುಖ ವಿಮಾನ ನಿಲ್ದಾಣಗಳನ್ನು ರಾಜ್ಯಕ್ಕೆ ವಹಿಸುವಂತೆ ಸೋಮಣ್ಣ ಮನವಿ ಮಾಡಲಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಈ ವಿಷಯ ತಿಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳು ಮತ್ತು ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಕೆಲಸವನ್ನು ನಮಗೇ ವಹಿಸಬೇಕು ಮತ್ತು ಇದಕ್ಕೆ ಬೇಕಾದ ಅನುದಾನವನ್ನೂ ಒದಗಿಸಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು.
ಮೈಸೂರು, ಮಂಗಳೂರು, ಕಲಬುರಗಿ ವಿಮಾನ ನಿಲ್ದಾಣಗಳು ಈಗ ಕಾರ್ಯಾಚರಣೆ ಮಾಡುತ್ತಿದ್ದು, ರಾಯಚೂರು, ಬೀದರ್, ಶಿವಮೊಗ್ಗ ವಿಮಾನ ನಿಲ್ದಾಣಗಳು ಸದ್ಯದಲ್ಲೇ ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದರು.
ಉಪನಗರ ರೈಲ್ವೆ : ಬೆಂಗಳೂರು ಉಪನಗರ ರೈಲ್ವೆ ಮಾರ್ಗದ ಮೊದಲ ಹಂತದ ಯೋಜನೆಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ 895 ಕೋಟಿ ರೂ. ವೆಚ್ಚವಾಗಲಿದೆ. ಇದು 25 ಕಿಲೋಮೀಟರುಗಳಷ್ಟು ಉದ್ದ ಇರಲಿದೆ ಎಂದರು. ಈ ಯೋಜನೆಯ ಕಾಮಗಾರಿ ಚಿಕ್ಕಬಾಣಾವರದಿಂದ ಆರಂಭವಾಗಲಿದ್ದು, ಬೈಯ್ಯಪ್ಪನ ಹಳ್ಳಿಯ ತನಕ ಸಾಗಲಿದೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಒಟ್ಟು 15,767 ಕೋಟಿ ರೂ. ವೆಚ್ಚವಾಗಲಿದೆ. ಯೋಜನೆಯ ಅಡಿ ನಾಲ್ಕು ಕಾರಿಡಾರುಗಳು ನಿರ್ಮಾಣವಾಗುತ್ತಿದ್ದು ಇವು ಒಟ್ಟು 148 ಕಿಲೋಮೀಟರುಗಳಷ್ಟು ಉದ್ದದ ಮಾರ್ಗವಾಗಿರಲಿದೆ. ಇದೇ ರೀತಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಇನ್ನೊಂದು ಕಾರಿಡಾರ್ ನಿರ್ಮಾಣವಾಗಲಿದ್ದು ಇದು 41.40 ಕಿಮೀ ಉದ್ದದ ಮಾರ್ಗವಾಗಿದೆ. ಕೆಂಗೇರಿ-ವೈಟ್ ಫೀಲ್ಡ್ ನಡುವೆ ಮೂರನೇ ಕಾರಿಡಾರ್ 46.24 ಕಿಮೀ ಹಾಗೂ ಚಂದಾಪುರ-ರಾಜಾನುಕುಂಟೆ ನಡುವೆ ನಿರ್ಮಾಣವಾಗಲಿರುವ ನಾಲ್ಕನೇ ಕಾರಿಡಾರು 46.24 ಕಿಲೋಮೀಟರ್ ಉದ್ದದ ಮಾರ್ಗವಾಗಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಆರಂಭವಾಗಲಿರುವ ಚಿಕ್ಕಬಾಣಾವರ ಮತ್ತು ಬೈಯ್ಯಪ್ಪನ ಹಳ್ಳಿ ರೈಲ್ವೆ ಮಾರ್ಗದ ಯೋಜನೆಗೆ ಅಗತ್ಯವಾದ ಭೂಮಿಯ ಸ್ವಾಧೀನ ಕಾರ್ಯ ಆರಂಭಗೊಂಡಿದ್ದು, ಇದಕ್ಕೆ ಸಂಬಂಧಿಸಿದ ಟೆಂಡರ್ ಅಂತಿಮಗೊಳಿಸಿ ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಹುಬ್ಬಳ್ಳಿಯಿಂದ ದೆಹಲಿಗೆ ನವೆಂಬರ್14 ರಿಂದ ನೇರ ವಿಮಾನ ಸೇವೆ : ಪ್ರಹ್ಲಾದ್ ಜೋಶಿ